ಚೀಲದಲ್ಲಿ ಮಾನವನ ಮೂಳೆಗಳು ಪತ್ತೆ

Advertisement

ಬೆಳಗಾವಿ(ಯಕ್ಸಂಬಾ): ಸಮೀಪದ ಭೋಜ ಕ್ರಾಸ್ ರಸ್ತೆಯ ಬಳಿ ದಿಲಾಲಪುರವಾಡಿ ಮಾರ್ಗದ ರಸ್ತೆ ಬದಿಯ ಮಡ್ಡಿ ಭೂಮಿಯಲ್ಲಿ ಮಾನವ ಮೂಳೆಗಳು ಮತ್ತು ತಲೆಬುರುಡೆಯ ಚೀಲ ಪತ್ತೆಯಾಗಿವೆ.
ಪಾದಚಾರಿಯೊಬ್ಬರು ಭೋಜ ರಸ್ತೆ ಬಳಿಯ ಮಡ್ಡಿ ಭೂಮಿಯಲ್ಲಿ ಮಾನವ ಮೂಳೆಗಳು ಮತ್ತು ತಲೆಬುರುಡೆಗಳನ್ನು ಗೋಣಿ ಚೀಲದಲ್ಲಿ ತುಂಬಿರುವುದನ್ನು ನೋಡಿದ್ದಾರೆ. ಈ ಘಟನೆ ಕುರಿತು ಸದಲಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್ ಬಿರಾದಾರ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಿಂದ ಫೊರೆನ್ಸಿಕ್ ತಂಡ ಕರೆಸಲಾಗಿತ್ತು. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗುಲೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೂಳೆ ಮತ್ತು ತಲೆಬುರುಡೆಯನ್ನು ಪರೀಕ್ಷೆಗೆ ಬೆಳಗಾವಿಗೆ ಕಳುಹಿಸಲಾಗಿದೆ. ಈ ತಲೆಬುರುಡೆ ಮತ್ತು ಮೂಳೆಗಳನ್ನು ಹೊರಗಿನಿಂದ ಯಾರೋ ತಂದು ಈ ಸ್ಥಳದಲ್ಲಿ ಇರಿಸಿದ್ದು ಮಹಿಳೆಯ ಮೂಳೆಗಳು ಎಂದು ಶಂಕಿಸಲಾಗಿದೆ. ಗೋಣಿಚೀಲದ ಬಳಿ ಬಳೆಗಳು ಮತ್ತು ಕುಪ್ಪಸ ಪತ್ತೆಯಾಗಿರುವುದರಿಂದ ಈ ಮೂಳೆಗಳು ಮಹಿಳೆಗೆ ಸೇರಿರುವ ಸಾಧ್ಯತೆ ಇದೆ ತಿಳಿದು ಬಂದಿದೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.