ಮಾನವತ್ವದ ಬದುಕು ಬಹು ಮುಖ್ಯ

ಗುರುಬೋಧೆ
Advertisement

ಜಗತ್ತಿನಲ್ಲಿ ಸ್ಥಾವರ-ಜಂಗಮವೆಂದು ಎರಡು ಪ್ರಕಾರದ ಸೃಷ್ಟಿ. ಸ್ಥಾವರವೆಂದರೆ ಚಲನವಲನ ಇಲ್ಲದುದು. ಗಿಡ-ಮರಾದಿಗಳು, ಗಿರಿ ಬೆಟ್ಟಗಳು ಇದ್ದಲ್ಲೇ ಇರುತ್ತವೆ. ಪಶು-ಪಕ್ಷಿಗಳು-ಮಾನವರು ಚಲನಶೀಲರು. ವಸ್ತು, ಒಡವೆಗಳು, ಇತರ ಕೆಲವು ವಸ್ತುಗಳು ಮನುಷ್ಯರೊಂದಿಗೆ ಪ್ರಾಣಿಗಳೊಂದಿಗೆ ಜಂಗಮವೆನಿಸುತ್ತವೆ. ಪ್ರಾಣಿಗಳು, ಪಕ್ಷಿಗಳು ಮತ್ತು ಮನುಷ್ಯರು ಅಡಿ ಇಡುತ್ತಾರೆ. ಆದರೆ ಅಡಿ ಇಡುವ ಮುನ್ನ ಆಲೋಚಿಸಬೇಕೆಂಬ ವಿವೇಕ ಇರುವುದಿಲ್ಲ. ಆಹಾರ, ನಿದ್ರೆ, ಭಯ, ಮೈಥುನ- ಈ ನಾಲ್ಕು ವಿಷಯಗಳು ಪಶು-ಪಕ್ಷಿಗಳು ಮತ್ತು ಮಾನವರಲ್ಲಿ ಸಮಾನವಾಗಿವೆ. ಇವೆಲ್ಲಕ್ಕೆ ಆಹಾರ ಬೇಕು, ನೀರು ಬೇಕು, ನಿದ್ರೆ ಬೇಕು. ಬಲಶಾಲಿಗಳಿಂದ ಭಯ. ಸಂತಾನೋತ್ಪತ್ತಿ ನಡೆಯುತ್ತದೆ. ಇದೆಲ್ಲ ಸಹಜವಾದುದು. ಮಾನವನಿಗೆ ವಿವೇಕ ಅರ್ಥಾತ್ ಜ್ಞಾನವೊಂದಿದೆ. ಮನುಷ್ಯನಿಗೆ ಜ್ಞಾನವಿರುವುದರಿಂದ ಜೀವನದಲ್ಲಿ ವಿವೇಚನೆ ಇರಬೇಕಾಗುತ್ತದೆ. ಮಾನವನಲ್ಲಿನ ಬುದ್ಧಿಶಕ್ತಿಯೇ ಮಾನವ ಮತ್ತು ಪ್ರಾಣಿಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಅದಕ್ಕೆಂದೇ ಮಾನವನನ್ನು `ಸೋಶಿಯಲ್ ಎನಿಮಲ್’ ಎಂದು ಸಮಾಜ ಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
ಊಟ ಮಾಡುವಾಗ ಚೆನ್ನಾಗಿ ಹಸಿದಿರಬೇಕು, ನೀರು ಕುಡಿಯುವಾಗ ಅದು ಪರಿಶುದ್ಧವಾಗಿರಬೇಕು, ಹೆಜ್ಜೆ ಇಡುವಾಗ ನೋಡಿ ಇಡಬೇಕು. ಕೆಲಸ ಮಾಡುವಾಗ ಸಫಲತೆ, ಯಶಸ್ಸಿನ ಅರಿವು ಇರಬೇಕು.
ಕೆಲವರು ಜನನವು ಅನಿಶ್ಚಿತ ಎನ್ನುತ್ತಾರೆ. ಜೀವಿಯ ಹುಟ್ಟು ಅನಿಶ್ಚಿತವಲ್ಲ. ಅವರವರ ಕರ್ಮಫಲದಂತೆ ಹುಟ್ಟುವುದು ನಿಶ್ಚಿತ. ಹುಟ್ಟು ಸಾವು ಸಹಜ ಪ್ರಕ್ರಿಯೆಗಳು. ಹುಟ್ಟು ಸಾವು ನಡುವಿನ ಬದುಕು ಅತ್ಯಂತ ಮಹತ್ವಪೂರ್ಣವಾದುದು. ಬದುಕಿನಲ್ಲಿ ಬರುವ ಬಡತನ ಮತ್ತು ಸಿರಿತನ ಬಿಸಿಲು-ನೆರಳು ಇದ್ದಂತೆ. ಬಡತನ, ಶ್ರೀಮಂತಿಕೆ ಇದ್ಯಾವುದೂ ಸ್ಥಿರವಲ್ಲ. ಬಡತನ ಬಂದಾಗ ಕುಗ್ಗದೆ, ಸಿರಿತನ ಬಂದಾಗ ಹಿಗ್ಗದೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ಮುನ್ನಡೆಯುವುದು ಬದುಕಿನ ಸಿದ್ಧಾಂತವಾಗಬೇಕು. ಅಲ್ಲದೆ ಕ್ಷಣಿಕವಾದ ಬಡತನ-ಸಿರಿತನಗಳನ್ನು ಮಾನವನ ಧೀಶಕ್ತಿಯಿಂದ, ಕತೃತ್ವ ಶಕ್ತಿಯಿಂದ ನಿವಾರಿಸಿಕೊಂಡು ಸ್ಥಿತಿವಂತನಾಗಬಹುದು. ಕೀರ್ತಿ ಮತ್ತು ಅಪಕೀರ್ತಿ ಬದುಕಿನ ಭಾಗಗಳೇ. ಅಪಕೀರ್ತಿ ಬರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಹಿತೋಕ್ತಿಯನ್ನು ಸದಾ ಗಮನದಲ್ಲಿ ಇಟ್ಟುಕೊಂಡಿರಬೇಕು. ಮಾನ-ಪ್ರಾಣ ಹೋದರೆ ಮುಗಿಯಿತು ಮರಳಿ ಬಾರವು ಎಂದು ವಿವೇಚನೆ ಇಟ್ಟುಕೊಂಡು ಜೀವನ ಸಾಗಿಸಬೇಕಿದೆ. ಜೀವನದ ಪರಮ ಗುರಿ ಅರಿತು ಹೆಜ್ಜೆ ಇಡಬೇಕಿದೆ.

ಬದುಕಬೇಕು ಬದುಕಬೇಕು ಜೀವವಿರುವವರೆಗೆ ಬದುಕಬೇಕು
ಜೀವನದಿ ಕುತ್ತುಗಳ ಸರಮಾಲೆ, ನಿರಾಶೆಗಳ ಸರಪಳಿಯ ಧರಿಸಿಯೂ ಬದುಕಬೇಕು
ಸಾಲಗಳ ಹೊತ್ತು, ಸೋಲುಗಳ ಹೊಡೆದಾದರೂ ಬದುಕಬೇಕು
ಹೇಗಾದರೂ ಬದುಕು, ಎಂತಾದರೂ ಬದುಕು
ಬದುಕಲೆಂದೆ ಹುಟ್ಟಿಸಿದ ಮೃಡಗಿರಿ ಅನ್ನದಾನಿಯ ನೆನೆವುತ್ತ
ಬದುಕಿದರೆ ಬದುಕು ಬಂಗಾರ ನೋಡಯ್ಯ

ಬದುಕು ಬದುಕುವಾಗ ಕುತ್ತುಗಳು, ನಿರಾಸೆ, ಸಾಲ-ಸೋಲ ಸಹಜವೆಂಬಂತೆ ಆವರಿಸುತ್ತವೆ. ಇಂಥ ಸಂದರ್ಭದಲ್ಲಿ ಬದುಕಲೆಂದೆ ಹುಟ್ಟಿಸಿದ ಭಗವಂತನ ಸ್ಮರಣೆ, ನೆನಹು ಮುಖ್ಯ. ಜೀವನ ಸುಲಭ ಸಾಧ್ಯವಲ್ಲ. ಕಷ್ಟ ಬಂದಾಗ ತಾಳ್ಮೆಗೆಡಬಾರದು, ಸುಖ ಬಂದರೆ ಹಿರಿ ಹಿರಿ ಹಿಗ್ಗದೆ, ಕೀರ್ತಿ ಹೆಚ್ಚಿತೆಂದು ಉಬ್ಬದೆ, ಅಪಕೀರ್ತಿಗೆ ಸೊರಗಬಾರದು, ಹೊಗಳಿಕೆಗೆ ಸುಖಿಸದೆ, ತೆಗಳಿಕೆಗೆ ದುಃಖಿತರಾಗಬಾರದು. ಜೀವನ ಎಂದ ಮೇಲೆ ಈ ಎಲ್ಲವೂ ಬರುತ್ತವೆ ಹೋಗುತ್ತವೆ. ಏತನ್ಮಧ್ಯೆ ಸಮಚಿತ್ತದ ಬಾಳ್ವೆಯೇ ಸ್ವೀಕಾರ ಯೋಗ್ಯ.