ಹುಬ್ಬಳ್ಳಿ. ಮತಾಂತರ ಎಂಬುದು ಇಡೀ ಸಮಾಜವನ್ನು ವಿಚ್ಛಿನ್ನ ಮಾಡುತ್ತಿದೆ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮಾಧ್ವರು ಸಂಘಟಿತರಾಗಬೇಕಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ಶ್ರೀ ಸುಬುಧೇಂದ್ರತೀರ್ಥರು ಎಚ್ಚರಿಕೆ ನೀಡಿದರು.
ಅಖಿಲ ಭಾರತ ಮಾಧ್ವ ಮಹಾಮಂಡಳವು ಅಯೋಜಿಸಿದ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಮತ್ತು ಶ್ರೀಮನ್ ನ್ಯಾಯಸುಧಾ ಮಂಗಲೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಭಿನ್ನತೆಯಲ್ಲಿ ಏಕತೆ ಎಂಬಂತೆ ಮಾಧ್ವರ ಏಳಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಮಾಧ್ವ ಮಹಾಮಂಡಳ ಸಮಾನ ವೇದಿಕೆಯಡಿ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಏಳಿಗೆಗೆ ಪರಿಶ್ರಮಿಸಬೇಕು ಎಂದು ಕರೆ ನೀಡಿದರು.
ಮಾಧ್ವ ಸಿದ್ಧಾಂತ ಅಧ್ಯಯನ ಹೆಚ್ಚು ನಡೆಯಬೇಕು. ಸಿದ್ಧಾಂತ, ವೇಧಾಧ್ಯಯನ ಮಾಡುವವರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಕೊರತೆ ಆತಂಕ ಬೇಡ. ಉಡುಪಿ ಪೇಜಾವರಮಠ, ಮಂತ್ರಾಲಯ ಮಠಗಳು ಎಲ್ಲ ರೀತಿಯ ನೆರವನ್ನು ವೇಧಾಧ್ಯಯನ ಪೂರೈಸಿದವರಿಗೆ ನೆರವು ನೀಡುತ್ತಿವೆ. ಯಾವುದೇ ಸಾಫ್ಟವೇರ್ ಕಂಪನಿ ಉದ್ಯೋಗಿಯ ವೇತನಕ್ಕಿಂತ ಕಡಿಮೆ ಇಲ್ಲದ ರೀತಿ ಪ್ರತಿ ತಿಂಗಳು ಒಂದು ಲಕ್ಷ ಗೌರವ ಸಂಭಾವನೆಯನ್ನು ಮಂತ್ರಾಲಯ ಪೀಠ ಅಲ್ಲಿನ ವೇಧಾಧ್ಯಯನ ಪೀಠದಲ್ಲಿ ಅಧ್ಯಯನ ಮಾಡಿದವರಿಗೆ ನೀಡುತ್ತಿದೆ ಎಂದು ನುಡಿದರು.
ಸೊಸಲೆ ವ್ಯಾಸರಾಜಮಠದ ಶ್ರೀಗಳು, ಭಂಡಾರಕೇರಿಮಠದ ಶ್ರೀಗಳು, ಸುಬ್ರಹ್ಮಣ್ಯಮಠದ ಶ್ರೀಗಳು, ಸೋದೆ ವಾದಿರಾಜಮಠದ ಶ್ರೀಗಳು, ಬನ್ನಂಜೆಯ ಶ್ರೀ ರಾಘವೇಂದ್ರ ತೀರ್ಥರು, ಶಿರೂರಿನ ರಾಜ ರಾಜೇಶ್ವರ ತೀರ್ಥರು,ಸಮ್ಮೇಳನಾಧ್ಯಕ್ಷ ವಿದ್ವಾನ್ ವಿ. ಹರಿದಾಸಭಟ್ ವೇದಿಕೆಯಲ್ಲಿದ್ದರು.