ಮಾಡಾಳ್ ವಿರುದ್ಧ ನಾನು ದಾಳಿ ಮಾಡಿಸಿಲ್ಲ: ಸಂಸದ ಸಿದ್ದೇಶ್ವರ್ ಸ್ಪಷ್ಟನೆ

Advertisement

ದಾವಣಗೆರೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನನ್ನ ಆತ್ಮೀಯ ಸ್ನೇಹಿತನಾಗಿದ್ದು, ಆತನ ಮೇಲೆ ನಾನು ಲೋಕಾಯುಕ್ತ ದಾಳಿ ಮಾಡಿಸಲು ಸಾಧ್ಯವೇ ಇಲ್ಲ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ವಯಸ್ಸಾಗಿದ್ದು, ಎಲ್ಲೋ ಬುದ್ಧಿಭ್ರಮಣೆಯಾಗಿರಬೇಕು. ಹಾಗಾಗಿ ನನ್ನ ವಿರುದ್ಧ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಮಾಡಾಳ್ ವಿರೂಪಾಕ್ಷಪ್ಪ ಜೊತೆಗೆ ನಾನು ಯಾವಾಗಲೋ ಜಗಳ ಮಾಡಿದ್ದೆನೆಂಬ ಕಾರಣಕ್ಕೆ ರೇಡ್ ಮಾಡಿಸುವಷ್ಟು ನಾನು ಸಣ್ಣವನಲ್ಲ. ನಾನು ಬಸವರಾಜ ಬೊಮ್ಮಾಯಿ ಸಹ ಗುದ್ದಾಡುತ್ತೇವೆ. ಪ್ರಲ್ಹಾದ ಜೋಶಿ ನಾವು ಗುದ್ದಾಡುತ್ತೇವೆ. ಅಷ್ಟೇ ನಾವೇನೂ ಹೊಡೆದಾಡಿಲ್ಲ ಎಂದು ಆರೋಪ ತಳ್ಳಿ ಹಾಕಿದರು.
ಬಿಜೆಪಿಯಿಂದ ಮಾಡಾಳ್ ವಿರೂಪಾಕ್ಷಪ್ಪಗೆ ಉಚ್ಛಾಟನೆ ಮಾಡುವ ವಿಚಾರದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ನನಗೆ ರಾಜಾಧ್ಯಕ್ಷ ಸ್ಥಾನ ಕೊಡಿಸಿ. ನಾನು ಉಚ್ಛಾಟನೆ ಮಾಡುತ್ತೀನೋ, ಇಲ್ಲವಾ ನೋಡಿ ಎಂದು ಡಾ.ಸಿದ್ದೇಶ್ವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.