ಮಹಾ ಚೀಟಿ ಎಡವಟ್ಟು ಐವರ ಮೇಲೆ ಆಪಾದನಾ ಪಟ್ಟಿ

ಬಸ್‌ ಟಿಕೆಟ್
Advertisement

ಗದಗ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದ ಸಾರಿಗೆ ಬಸ್ಸುಗಳಲ್ಲಿ ನೀಡುವ ಟಿಕೇಟ್‌ಗಳಲ್ಲಿ ಮಹಾರಾಷ್ಟ್ರ ಸಾರಿಗೆ ಪರಿವಾಹನ ಎಂದು ಮುದ್ರಿಸಿದ ಟಿಕೇಟ್‌ಗಳನ್ನು ವಿತರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಸ್ತೆ ಸಾರಿಗೆ ಇಲಾಖೆ ಐದು ಗುಮಾಸ್ತರು, ಓರ್ವ ಚಾಲಕ ಕಂ ನಿರ್ವಾಹಕರ ವಿರುದ್ಧ ಆಪಾದನಾ ಪಟ್ಟಿ ಜಾರಿ ಮಾಡಿದೆ.
ಗದಗ ಡಿಪೋದ ಸಹಾಯಕ ಐ.ಪಿ. ಅಂಗಡಿ, ಕಿರಿಯ ಸಹಾಯಕ ಎಸ್.ಬಿ. ಸೋಮಣ್ಣವರ, ಚಾಲಕ ಕಂ ನಿರ್ವಾಹಕನಾಗಿರುವ ಎಂ.ಪಿ. ಚಲುವಾದಿ, ರೋಣ ಘಟಕದ ಕಿರಿಯ ಸಹಾಯಕರುಗಳಾದ ವಿ.ಆರ್.ಹಿರೇಮಠ, ಎಚ್.ವೈ.ಉಮಚಗಿ, ಎಂ.ಎಸ್.ವಿರಕ್ತಮಠ ಎಂಬುವವರಿಗೆ ಆಪಾದನಾ ಪಟ್ಟಿ ಜಾರಿಗೊಳಿಸಲಾಗಿದೆ. ಈ ನೌಕರರಿಂದ ವರದಿ ಪಡೆದು ಕ್ರಮ ಜರುಗಿಸಲಾಗುವದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶೀನಯ್ಯ ಸಂ.ಕ.ಕ್ಕೆ ತಿಳಿಸಿದರು.
ಮುಂಡರಗಿ ತಾಲೂಕನ ಅತ್ತಿಕಟ್ಟಿ, ಡೋಣಿ, ಡೋಣಿ ತಾಂಡಾಗಳಿಂದ ಗದಗಕ್ಕೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮಹಾರಾಷ್ಟ್ರ ಸಾರಿಗೆ ಪರಿವಾಹನವೆಂದು ಮುದ್ರಿಸಿರುವ ಟಿಕೆಟ್ ವಿತರಿಸಿದ್ದು ಕನ್ನಡಿಗರು, ಕನ್ನಡ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಬೆಳಕಿಗೆ ಬಂದ ಕೂಡಲೇ ಸಾರಿಗೆ ಸಂಸ್ಥೆ ಟಿಕೆಟ್ ರೋಲ್‌ಗಳನ್ನು ವಾಪಸ್ಸು ಪಡೆದಿತ್ತು.