ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇಡೀ ದೇಶಕ್ಕೆ ಪ್ರೇರಣಾಶಕ್ತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧೀಜಿ ಬದುಕಿನಲ್ಲಿ ಹಲವಾರು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಅದರ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಟವನ್ನು ಮಾಡಿದವರು. ದೇಶಕ್ಕಾಗಿ ತಮ್ಮ ಜೀವನವನ್ನು ಮತ್ತು ಸರ್ವಸ್ವವನ್ನು ತ್ಯಾಗ ಮಾಡಿದವರು. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಹಾಗೂ ಆಯಾಮವನ್ನು ನೀಡಿದರು. ಸತ್ಯ ಹಾಗೂ ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ದೇಶಕ್ಕೆ ನೀಡಿದರು. ಆ ಸಂದರ್ಭದಲ್ಲಿ ಬಹಳ ಜನ ಈ ಬಗ್ಗೆ ತಮ್ಮದೇ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಕಾಲಕ್ರಮೇಣ ಇವುಗಳು ದೈತ್ಯ ಬ್ರಿಟಿಷ್ ಸಾಮ್ರಾಜ್ಯದ ದಮನಕಾರಿ ನೀತಿಯ ವಿರುದ್ಧ ಜನಾಂದೋಲನ ಸೃಷ್ಟಿಯಾಗಿ ಕೊನೆಗೆ ಬ್ರಿಟಿಷರು ದೇಶವನ್ನು ಬಿಟ್ಟುಹೋಗುವ ಮಟ್ಟಕ್ಕೆ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವತಂತ್ರ ಹೋರಾಟವಾಗಿ ಸ್ವಾತಂತ್ರ್ಯವೂ ದೊರೆತಿದೆ ಎಂದರು.