ಪಾಕಿಸ್ತಾನದ ಪೇಶಾವರದ ಮಸೀದಿಯೊಂದರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಹಲವು ಮಂದಿ ಮೃತಪಟ್ಟಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಬಾಂಬ್ ದಾಳಿ ನಡೆದಿದೆ. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದಿದೆ. ವ್ಯಕ್ತಿಯೊಬ್ಬ ಪ್ರಾರ್ಥನೆಯ ಸಮಯದಲ್ಲಿ ಮಸೀದಿಯೊಳಗೆ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆತ ಪ್ರಾರ್ಥನೆಯ ಸಮಯದಲ್ಲಿ ಮೊದಲ ಸಾಲಿನಲ್ಲಿ ಇದ್ದನು. ಅವನು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಭದ್ರತಾ ಇಲಾಖೆ ತಿಳಿಸಿದೆ.
ಘಟನೆ ವೇಳೆ ಗಾಯಗೊಂಡವರನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರೆಲ್ಲರೂ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಕೆಲವು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದ್ದು, ಆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.