ಹುಬ್ಬಳ್ಳಿ: ನಾಲ್ಕಾರು ದಿನಗಳಿಂದ ಮರೆಯಾಗಿದ್ದ ಮಳೆ ಸೋಮವಾರ ರಾತ್ರಿ ವಾಣಿಜ್ಯ ನಗರಿಯಲ್ಲಿ ಆರ್ಭಟಿಸಿತು. ಸಂಜೆ ಅಲ್ಪಸ್ವಲ್ಪ ಸುರಿದ ಮಳೆ ರಾತ್ರಿ 8 ಗಂಟೆಯ ಬಳಿಕ ಸುಮಾರು ಒಂದುವರೆ ತಾಸು ಧಾರಾಕಾರವಾಗಿ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತವಾಯಿತು. ವ್ಯಾಪಾರಸ್ಥರು ಸಂಜೆ ವ್ಯಾಪಾರವನ್ನು ಕಳೆದುಕೊಂಡರು.
ಕೇವಲ ೧೫-೨೦ ನಿಮಿಷಗಳಲ್ಲಿ ಮಳೆರಾಯನ ಆರ್ಭಟಕ್ಕೆ ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶ, ತಗ್ಗು ಪ್ರದೇಶ ಮಳೆ ನೀರಿನಿಂದ ಆವೃತವಾದವು. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಕೊಪ್ಪೀಕರ ರಸ್ತೆ, ಕೊಯಿನ್ ರಸ್ತೆ, ಸ್ಟೇಶನ್ ರಸ್ತೆ, ದುರ್ಗದ ಬೈಲ್ನಲ್ಲಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ಸಿಲುಕಿಕೊಂಡರು. ಗಂಟೆಗಟ್ಟಲೆ ಕಾದು ನಿಲ್ಲಬೇಕಾಯಿತು. ಕೊಯಿನ್ ರಸ್ತೆಯಂತೂ ಹಳ್ಳದಂತೆ ಗೋಚರಿಸಿತು. ಮೇಲ್ಭಾಗದಿಂದ ಹರಿದು ಬಂದ ನೀರು ಮುಂದೆ ಸಾಗಲು ಮಾರ್ಗವಿಲ್ಲದೇ ಯು ಮಾಲ್ ಮುಂಭಾಗದಲ್ಲಿ ಕೆರೆಯಂತೆ ನಿಂತಿತು. ಇಂಥದ್ದರಲ್ಲಿಯೇ ಕೆಲವು ದ್ವಿಚಕ್ರವಾಹನ ಸವಾರರು ನುಗ್ಗಿ ಸಾಗಿದರು. ರಾತ್ರಿ ೧೦.೩೦ರ ಹೊತ್ತಿಗೆ ಸ್ವಲ್ಪ ಮಳೆ ಕಡಿಮೆಯಾಯಿತು. ಬಳಿಕ ವ್ಯಾಪಾರಸ್ಥರು, ಮಾರುಕಟ್ಟೆಗೆ ಬಂದ ಜನ ಮನೆ ಸೇರಿದರು.