ಮರಣ ಮೃದಂಗಕ್ಕೆ ರೋಣ ಬ್ರೇಕ್‌

Advertisement

ಗಣೇಶ್ ರಾಣೆಬೆನ್ನೂರು
ಸಾಲು ಸಾಲು ಮಕ್ಕಳ ಕೊಲೆ. ಒಂದು ಪ್ರಕರಣ ಬೇಧಿಸುವಷ್ಟರಲ್ಲೇ ಮತ್ತೊಂದು ಕೊಲೆ. ಅದರ ಬೆನ್ನಲ್ಲೇ ಮತ್ತೊಂದು… ಮರಣ ಮೃದಂಗದ ಸದ್ದು ಜೋರಾಗಿರುವಾಗಲೇ ವಿಕ್ರಾಂತ್ ರೋಣ'ನ ಆಗಮನವಾಗುತ್ತದೆ. ಅದಕ್ಕೂ ಮುಂಚಿನ ಅಧಿಕಾರಿಯ ಹೆಣ ಅದೇ ಊರಿನ ಹಳೇ ಬಾವಿಯಲ್ಲಿ ರುಂಡವಿಲ್ಲದೇ ಹಗ್ಗಕಗಕೆ ಕಟ್ಟಿ ಬಿಸಾಡಲಾಗಿರುತ್ತದೆ. ನೂತನ ಪೊಲೀಸ್ ಅಧಿಕಾರಿಯಾಗಿ ಬಂದ ವಿಕ್ರಾಂತ್, ಆತನ ಹಿನ್ನೆಲೆ, ಹತ್ತಾರು ಕೊಲೆ ಕೇಸು ಇತ್ಯಾದಿಗಳ ಮಧ್ಯೆ ಕಥೆ ಸಾಗುತ್ತಾ ಸಾಗುತ್ತಾ ಮಧ್ಯಂತರದ ಹೊತ್ತಿಗೆ ಬೇರೆ ಬೇರೆ ಮಜಲಿನತ್ತ ಮುಖ ಮಾಡಿರುತ್ತದೆ. ಹಾಗಾದರೆ ನಿಜವಾದ ಕೊಲೆಗಾರ ಯಾರು..? ಇಂಥದ್ದೊಂದು ಯಕ್ಷಪ್ರಶ್ನೆಗೆ ಉತ್ತರ ಸಿಗಲು ಸಿನಿಮಾದ ಕ್ಲೈಮ್ಯಾಕ್ಸ್‌ವರೆಗೂ ಕಾಯಲೇಬೇಕು. ಒಂದು ಆ್ಯಕ್ಷನ್ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಕ್ಕೆ ಬೇಕಾದ ಸರಕುಗಳನ್ನಿಟ್ಟುಕೊಂಡು ನಿರ್ದೇಶಕ ಅನೂಪ್ ಭಂಡಾರಿವಿಕ್ರಾಂತ್ ರೋಣ’ ಕಥೆಯನ್ನು ರೋಚಕವಾಗಿಸುವಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಇಡೀ ಕಥೆ ಕತ್ತಲ ಕಾನನದಲ್ಲಿ ಸಾಗುವುದರಿಂದ ನೆರಳು-ಬೆಳಕಿನಾಟ ಜೋರಾಗಿಯೇ ಇದೆ.

ಗರ ಗರ ಗರ ಗಗ್ಗರ ಜರ್ಭ, ತಿರನಲ್ಕುರಿ ನೆತ್ತರ ಪರ್ಭ...' ಎಂಬ ಧನಿ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವಾಗಲೇ ತೆರೆಯ ಮೇಲೆ ಮತ್ತಷ್ಟು ಕುತೂಹಲ, ಭಾವತೀವ್ರತೆ, ಎದೆಬಡಿತ ಏರುಪೇರಾಗುತ್ತದೆ. ಗಂಭೀರವಾಗಿ ಸಾಗುವ ಚಿತ್ರಕಥೆಯಲ್ಲಿ ಆಗಾಗ ಬ್ರೇಕ್ ನೀಡೋದುಎಕ್ಕ ಸಕ್ಕ’ ರಕ್ಕಮ್ಮ, ಮಗುವಿನ ಲಾಲಿತ್ಯದ ಹಾಡು ತಣ್ಣನೆ ಗಾಳಿಯಂತೆ ಬೀಸತೊಡಗುತ್ತದೆ. ಕಥೆಯಲ್ಲೂ ತಂಗಾಳಿ, ಬಿರುಗಾಳಿ ಬೀಸುವಂತೆ ನೋಡಿಕೊಳ್ಳಲಾಗಿದೆ.

ಯಥಾಪ್ರಕಾರದ ಹೀರೋಯಿಸಂ' ನೆರಳಿನಿಂದ ಕೊಂಚ ಭಿನ್ನವಾದ ಪಾತ್ರಕ್ಕೆ ಸುದೀಪ್ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಅವರ ಪಾತ್ರ ಪೋಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪಾತ್ರಗಳು ಗಮನ ಸೆಳೆಯುತ್ತವೆ. ಮಿಲನಾ ನಾಗರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೂ ಗಮನಾರ್ಹ ನಟನೆ. ಇಲ್ಲಿ ಕಲಾವಿದರು ಒಂದು ಹಂತಕ್ಕೆ ತೂಗಿದರೆ, ತಾಂತ್ರಿಕವಾಗಿ ಹೆಗಲ ಮೇಲೆ ಹೊತ್ತು ಮತ್ತೊಂದು ಹಂತಕ್ಕೆ ಕೊಂಡೊಯ್ದಿರುವುದು ತಂತ್ರಜ್ಞರು. ಕಲಾ ನಿರ್ದೇಶಕ ಶಿವಕುಮಾರ್ ಕಾರ್ಯವೈಖರಿ, ವಿಲಿಯಂ ಡೇವಿಡ್ ಕ್ಯಾಮೆರಾ ಕುಸುರಿ, ಅಜನೀಶ್ ಲೋಕನಾಥ್ ಸಂಗೀತದ ಪರಿ ಇಡೀ ಸಿನಿಮಾದ ಪ್ಲಸ್ ಪಾಯಿಂಟ್ ಹಾಗೂ ಪಿಲ್ಲರ್‌ಗಳಂತೆ ಭಾಸವಾಗುತ್ತಾರೆ. ಎಲ್ಲರಿಂದಲೂ ಕೆಲಸ ತೆಗೆಸಿಕೊಂಡು ತಮ್ಮ ಕಥೆ-ಚಿತ್ರಕಥೆಗೆ ಸಾಕಷ್ಟು ಮೆರುಗು ತುಂಬಿಸಿಕೊಳ್ಳುವಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಶ್ರಮ ಎದ್ದು ಕಾಣುತ್ತದೆ. ಹಾಗೆಯೇ ಅವರ ಚೊಚ್ಚಲ ಸಿನಿಮಾರಂಗಿತರಂಗ’ದ ನೆರಳು ಆಗಾಗ ಇಲ್ಲೂ ಗೋಚರವಾಗುತ್ತದೆ ಎಂಬ ಸಣ್ಣ-ಪುಟ್ಟ ಅಂಶ ಹೊರತುಪಡಿಸಿದರೆ `ವಿಕ್ರಾಂತ್’ ಲೋಕದಲ್ಲಿ ಒಮ್ಮೆ ಸಂಚರಿಸಿ ಬರಲು ಅಡ್ಡಿಯಿಲ್ಲ