ಬೆಂಗಳೂರು: ಇತ್ತೀಚಿಗೆ ಶಾಲಾ–ಕಾಲೇಜುಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದ್ದು, ಇದರ ವಿರುದ್ಧ ಸಮರ ಸಾರಬೇಕು. ಪ್ರತಿ ಮನೆ ಮನೆಯಲ್ಲೂ ಡ್ರಗ್ಸ್ ವಿರುದ್ಧ ಅಭಿಯಾನ ಶುರುವಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು.
ಬೆಂಗಳೂರಿನಲ್ಲಿ ನಡೆದ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಮೋದಿ ನೇತೃತ್ವದ ಸರ್ಕಾರ ಸಮರ ಸಾರಿದೆ. ಜನರಿಗೆ ಡ್ರಗ್ಸ್ ಮುಕ್ತ ರಾಜ್ಯ, ದೇಶ ಮಾಡೋದು ಈ ಅಭಿಯಾನದ ಉದ್ದೇಶ ಸಹ ಆಗಿದೆ ಎಂದರು. ಈಗಾಗಲೇ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಸಮಿತಿಗಳು ರಚನೆಯಾಗಿದ್ದು, ನಿರಂತರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು