ಮನಸ್ಸಿನ ನಿಗ್ರಹ ಅತಿ ಅವಶ್ಯ

ಗುರುಬೋಧೆ
PRATHAPPHOTOS.COM
Advertisement

ಮನಸ್ಸಿನ ನಿಗ್ರಹ ಮಾಡುವುದು ಅಗತ್ಯ ಹಾಗೂ ಕಷ್ಟ ಸಾಧ್ಯವೂ ಕೂಡ. ವಾಯುವನ್ನು ನಿಗ್ರಹ ಮಾಡುವುದು ಎಷ್ಟು ಕಷ್ಟವೋ ಮನಸ್ಸನ್ನು ನಿಗ್ರಹ ಮಾಡುವುದು ಕೂಡ ಅಷ್ಟೇ ಕಷ್ಟ. ಕಷ್ಟ ಆದರೆ ಅಸಾಧ್ಯವಲ್ಲ. ಕಷ್ಟ ಸಾಧ್ಯ. ಅಭ್ಯಾಸದಿಂದ ಮನಸ್ಸನ್ನು ನಿಗ್ರಹಿಸಬಹುದು ಎಂದು ಪರಮಾತ್ಮನು ಅರ್ಜುನನಿಗೆ ಉತ್ತರ ಕೊಟ್ಟಿದ್ದಾನೆ.
ಮನಸ್ಸಿನ ನಿಗ್ರಹ ಮಾಡಲು ಏನು ಉಪಾಯ ಎಂದು ಯೋಚಿಸಿದಾಗ, ಬಾಹ್ಯ ವಿಷಯಗಳ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಮೊದಲಿಗೆ ಮಾನಸಿಕ ಆಸಕ್ತಿ ಇದ್ದರೂ ಪರವಾಗಿಲ್ಲ, ಆದರೆ ವಿಷಯಗಳ ಭೋಗ ಮಾಡುವುದನ್ನು ತಕ್ಷಣ ನಿಲ್ಲಿಸಿ ಬಿಡಬೇಕು. ಇಂದ್ರಿಯಗಳು ವಿಷಯಾಸಕ್ತಿಯ ಕಡೆಗೆ ಹೋಗದೆ ಇದ್ದರೆ ಮನಸ್ಸು ಸ್ವಲ್ಪ ದಿನ ವಿಷಯಗಳನ್ನು ಬಯಸಿದರೂ ನಂತರ ಕ್ರಮೇಣ ಆ ವಿಷಯಗಳ ಕುರಿತಾದ ಆಸಕ್ತಿಯು ಕಡಿಮೆಯಾಗುತ್ತ ಬರುತ್ತದೆ.
ಜೊತೆಗೆ ಆಧ್ಯಾತ್ಮಿಕವಾಗಿ ನಾವು ಮಾಡಬೇಕಾದ ಕೆಲಸ ಎಂದರೆ ಭಗವಂತನ ಹಾಗೂ ವಾಯುದೇವರನ್ನು ಆರಾಧಿಸಿ ಅವರ ಅನುಗ್ರಹಕ್ಕೆ ಪಾತ್ರರಾಗುವುದು.
ಇಲ್ಲಿ ಭಗವಂತ ಬಾಣಾಸುರನ ಕಥೆ ತಿಳಿಯಬೇಕು. ಶ್ರೀಕೃಷ್ಣ ಪರಮಾತ್ಮ ಎಲ್ಲರನ್ನೂ ಸೋಲಿಸಿ ಮೊಮ್ಮಗನಾದ ಅನಿರುದ್ಧನನ್ನು ಕರೆದುಕೊಂಡು ಬರುತ್ತಾನೆ. ಅನಿರುದ್ಧನ ವಿವಾಹ ಬಾಣಾಸುರನ ಮನೆಯಲ್ಲಿ ಉಷೆಯೊಡನೆ ನೆರವೇರಿರುತ್ತದೆ. ಉಷಾ ದೇವಿ ಅನಿರುದ್ಧನನ್ನು ಕೇವಲ ಕನಸಿನಲ್ಲಿ ಕಂಡಿರುತ್ತಾಳೆ. ಅವಳು ಕನಸಿನಲ್ಲಿ ಕಂಡ ವ್ಯಕ್ತಿಯನ್ನು ಮದುವೆಯಾಗಲು ಬಯಸಿರುತ್ತಾಳೆ.
ಕೇವಲ ಕನಸಿನಲ್ಲಿ ಕಂಡ ವ್ಯಕ್ತಿಯನ್ನು ಮದುವೆಯಾಗಲು ಹುಡುಕುವುದು ಹೇಗೆ? ಉಷಾ ದೇವಿಯ ಗೆಳತಿ ಚಿತ್ರಲೇಖಾ ಅವಳು ಹೆಸರಿಗೆ ತಕ್ಕಂತೆ ಸುಂದರವಾದ ಚಿತ್ರವನ್ನು ಬಿಡಿಸುವವಳು ಆಗಿದ್ದಳು. ಅವಳಿಗೆ ಹೇಳಿ ಅನಿರುದ್ಧನ ಚಿತ್ರವನ್ನು ಬರೆಸಲು ಪ್ರಪಂಚದಲ್ಲಿ ಇದ್ದ ಎಲ್ಲ ರಾಜಕುಮಾರರ ಚಿತ್ರ ಬರೆದು ತೋರಿಸುತ್ತಾಳೆ, ಉಷಾ ದೇವಿಯು ಅನಿರುದ್ಧನನ್ನು ಗುರುತಿಸುತ್ತಾಳೆ. ಮಾಯಾ ವಿದ್ಯೆಯಿಂದ ಕರೆದುಕೊಂಡು ಬರುತ್ತಾಳೆ. ಆಗ ಬಾಣಾಸುರ ಯುದ್ಧಕ್ಕೆ ಬಂದಾಗ ಶ್ರೀಕೃಷ್ಣ ಪರಮಾತ್ಮನು ಬಂದು ಬಾಣಾಸುರನನ್ನೂ ಅವನ ಸಂಗಡಿಗರನ್ನು ಸೋಲಿಸುತ್ತಾನೆ.
ಬಾಣಾಸುರನ ಸಹಾಯಕ್ಕೆ ಸ್ವತಃ ರುದ್ರ ದೇವರು ಬಂದರೂ ಅವರನ್ನೂ ಸೋಲಿಸುತ್ತಾನೆ. ಇದು ಹೇಗೆ ಸಾಧ್ಯ ಎಂದರೆ ದೇವರು ಪ್ರತಿ ಕಲ್ಪದಲ್ಲಿಯೂ ಒಬ್ಬನೆ. ಆದರೆ ರುದ್ರದೇವರು ಪ್ರತಿ ಕಲ್ಪದಲ್ಲಿ ಬದಲಾಗುತ್ತಾ ಇರುತ್ತಾರೆ.
ರುದ್ರ ದೇವರನ್ನು ಸೋಲಿಸುವುದು ಕಷ್ಟವೇನಲ್ಲ ಎಂದು ಶ್ರೀಮದಾಚಾರ್ಯರು ಹೇಳುತ್ತಾರೆ. ಕೃಷ್ಣ ಪರಮಾತ್ಮನಿಗೆ ಅನಂತ ರುದ್ರರನ್ನು ಸೋಲಿಸುವ ಶಕ್ತಿ ಇದೆ. ಅಂತಹ ಭಗವಂತನು ಮನಸ್ಸಿನ ನಿಯಾಮಕ ರುದ್ರದೇವರಿಗೆ ನಮಗೆ ಸದ್ಬುದ್ಧಿ ಕೊಟ್ಟು ನಮ್ಮನ್ನು ಅನುಗ್ರಹ ಮಾಡುವಂತೆ ಭಗವಂತನಲ್ಲಿ ಪ್ರಾರ್ಥಿಸಬೇಕು. ಸನ್ಮಾರ್ಗದಲ್ಲಿ ಇರುವಂತೆ ಮಾಡಿದರೆ ಉತ್ತಮ ಪ್ರಾರ್ಥನೆ ಮಾಡಿದರೆ ಪರಮಾತ್ಮ ಅವಶ್ಯವಾಗಿ ನೆರವೇರಿಸುತ್ತಾನೆ.