ಮಂಗಳೂರು: ಕುಡಿದ ಮತ್ತಿನಲ್ಲಿ ಪತಿ ಪತ್ನಿಯನ್ನು ಕೊಲೆ ಮಾಡಿದ ಘಟನೆ ತೆಂಕ ಎಕ್ಕಾರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಕೊಲೆ ಮಾಡಿದ ಪತಿ ದುರ್ಗೇಶ ಎಂಬಾತನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿ ನಿವಾಸಿ ಸರಿತಾ(೩೫) ಕೊಲೆಯಾದ ಮಹಿಳೆ. ಆರೋಪಿ ಪತಿ ದುರ್ಗೇಶ ಎಂಬಾತ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿ ಸರಿತಾ ಜತೆ ಜಗಳವಾಡಿ, ಮರದ ರೀಪಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ಈ ದಂಪತಿಯ ಪುತ್ರ ರಾಹುಲ್ ಭಯದಿಂದ ಅಜ್ಜಿ ಮನೆಗೆ ಓಡಿಹೋಗಿದ್ದಾನೆ. ಇಂದು ಬೆಳಗ್ಗೆ ಆರೋಪಿ ದುರ್ಗೇಶ್ ತನ್ನ ಅಣ್ಣ ಮಧು ಎಂಬವರಿಗೆ ಕರೆ ಮಾಡಿ ಪತ್ನಿ ಸತ್ತಿರುವ ವಿಚಾರ ತಿಳಿಸಿದ್ದಾನೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.