ಮತ್ತೊಂದು ತಿರುವು

ಗುರುರಾಜ ಕರಜಗಿ
Advertisement

ನಾನು ಅಂತರ್‌ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲನಾಗಿ ಮೂರು ವರ್ಷಗಳು ಕಳೆಯುತ್ತ ಬಂದವು. ಇಲ್ಲಿಗೆ ಬರುವವರೆಗೆ ಯಾವಾಗಲೂ ಉನ್ನತ ಶಿಕ್ಷಣದಲ್ಲೇ ಇದ್ದ ನನಗೆ, ಒಂದು ದಿನ ನಾನು ಶಾಲೆಯ ಮಕ್ಕಳಿಗೆ ಪಾಠ ಮಾಡುತ್ತೇನೆ ಎಂದು ಕೊಂಡಿರಲಿಲ್ಲ. ಅದು ಭಗವಂತನ ಇಚ್ಛೆ ಆಗಿದ್ದೀತು. ಈತನಿಗೆ ಮಕ್ಕಳಿಗೆ ಕಲಿಸುವುದೂ ಅಭ್ಯಾಸವಾಗಲಿ ಎಂದು ಕೊಂಡು ನನಗೆ ಒಂದು ಉತ್ತಮ ಅನುಭವವನ್ನು ನೀಡಿದ ಎಂದುಕೊಂಡಿದ್ದೇನೆ.
ಒಂದು ದಿನ ನಾನು ಒಬ್ಬನೇ ಕುಳಿತು ಚಿಂತಿಸಿದೆ. ನಾನು ಸಂಶೋಧನೆ ಮಾಡಿದ್ದೇನೆ, ಸ್ನಾತಕೋತ್ತರ ತರಗತಿಗಳಿಗೆ, ಪದವಿ ವಿದ್ಯಾರ್ಥಿಗಳಿಗೆ, ಈಗ ಶಾಲಾಮಕ್ಕಳಿಗೆ ಪಾಠ ಮಾಡಿದ್ದೇನೆ. ಅಂದರೆ ಶಿಕ್ಷಣದ ಎಲ್ಲ ಹಂತಗಳನ್ನು ಕಂಡಿದ್ದೇನೆ. ಮುಂದೆ ನಮಗೆ ಒಳ್ಳೆಯ ಇಂಜಿನೀಯರುಗಳು, ವೈದ್ಯರು, ವಕೀಲರು, ಲೆಕ್ಕಿಗರು ಸಿಗಬಹುದು, ಆದರೆ ಈಗಿನ ಲಕ್ಷಣಗಳನ್ನು ನೋಡಿದರೆ ಒಳ್ಳೆಯ ಶಿಕ್ಷಕರು ದೊರಕುವುದು ತುಂಬ ಕಷ್ಟ ಎನ್ನಿಸಿತು. ಶಿಕ್ಷಕರು ದೊರೆತಾರು, ಆದರೆ ಬದ್ಧತೆಯುಳ್ಳ, ಪ್ರಾಮಾಣಿಕ, ಅಧ್ಯಯನಶೀಲರಾದ ಶಿಕ್ಷಕರು ದೊರೆಯುವುದು ಹುಲ್ಲಿನ ಮೆದೆಯಲ್ಲಿ ಸೂಜಿಯನ್ನು ಹುಡುಕಿದಷ್ಟೇ ಕಷ್ಟದ ಕೆಲಸ. ಶಿಕ್ಷಕರು ದೊರೆಯುವುದಿಲ್ಲ ಎಂದು ಕೊರಗುತ್ತ ಕೂಡ್ರುವುದಕ್ಕಿಂತ ಅವರನ್ನು ತಯಾರು ಮಾಡುವುದು ಒಳ್ಳೆಯದು ಎನ್ನಿಸಿತು. ಆದರೆ ಅವರನ್ನು ತಯಾರು ಮಾಡುವುದು ಹೇಗೆ?
ಈಗಾಗಲೇ ಅನೇಕ ಶಿಕ್ಷಕ ತರಬೇತಿ ಕೇಂದ್ರಗಳು ವ್ಯವಸ್ಥೆಯಲ್ಲಿ ಇದ್ದವು. ಅನೇಕ ಕಾಲೇಜುಗಳು ಬಿ.ಎಡ್ ಮತ್ತು ಡಿ.ಎಡ್ ಶಿಕ್ಷಣವನ್ನು ನೀಡುತ್ತಿದ್ದವು. ಆದರೆ ಈ ವ್ಯವಸ್ಥೆಯಷ್ಟು ಭ್ರಷ್ಟ ವ್ಯವಸ್ಥೆ ಶಿಕ್ಷಣದಲ್ಲಿ ಎಲ್ಲಿಯೂ ಇಲ್ಲ. ಆಶ್ಚರ್ಯವೆಂದರೆ, ಪ್ರತಿಶತ ತೊಂಭತ್ತೊಂದರಷ್ಟು ಜನರು ಒಂದೂ ತರಗತಿಯನ್ನು ತೆಗೆದುಕೊಳ್ಳದೆ ಪದವಿಯನ್ನು ಪಡೆದುಕೊಳ್ಳುತ್ತಾರೆ. ಈ ಕಾಲೇಜುಗಳಲ್ಲಿ ಬಹಳಷ್ಟು ವ್ಯಾಪಾರೀ ಕೇಂದ್ರಗಳು. ಅಲ್ಲಿ ವಿದ್ಯಾರ್ಥಿಗಳು ಬರುವುದಿಲ್ಲ. ಬರೀ ದಾಖಲೆಯಲ್ಲಿ ಮಾತ್ರ ವಿದ್ಯಾರ್ಥಿಗಳ ಹೆಸರಿರುತ್ತದೆ. ಅವರು ಮಾಡಬೇಕಾದ ಪ್ರಾಜೆಕ್ಟಗಳನ್ನೆಲ್ಲ ಶಿಕ್ಷಕರೇ ಮಾಡಿಡುತ್ತಾರೆ. ಮರುವರ್ಷ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೂ ಅವೇ ಕಲಿಕಾ ಸಾಮಗ್ರಿಗಳು. ಒಂದು ಬಾರಿ ನನ್ನ ಕಡೆಗೆ ವ್ಯಕ್ತಿಯೊಬ್ಬರು ಬಂದರು. ಅವರು ನಾಲ್ಕು ಇಂಥ ಕಾಲೇಜುಗಳ ಅಧ್ಯಕ್ಷರಂತೆ. ನನಗೆ ಹೇಳಿದರು, “ಸರ್, ನೀವೂ ಒಂದು ನಾಲ್ಕು ಕಾಲೇಜು ಮಾಡಿಕೊಳ್ಳಿ. ಇದರಲ್ಲಿ ತುಂಬ ಹಣ ಇದೆ”
“ಹೌದೇ?” ಎಂದು ಕೇಳಿದೆ
“ಸರ್, ನನ್ನದೇ ನಾಲ್ಕು ಕಾಲೇಜಿದೆ. ಅಡ್ಮಿಶನ್ ಎಲ್ಲಾ ಫುಲ್ ಆಗಿದ್ದಾವೆ”.
“ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಾರೆಯೇ?”
“ಅಯ್ಯೋ, ಅವರೇಕೆ ಬರಬೇಕು ಸರ್? ಅವರು ಬಂದರೇ ತೊಂದರೆ. ಬಂದರೆ ಪಾಠ ಮಾಡಬೇಕು, ಶಿಕ್ಷಕರನ್ನು ನೇಮಿಸಿಕೊಳ್ಳಬೇಕು, ಅವರಿಗೆ ಸಂಬಳ ಕೊಡಬೇಕು. ಮತ್ತೆ, ಕಾಲೇಜಿಗೆ ಬರದೆ ಇರುವ ವಿದ್ಯಾರ್ಥಿಗಳು ಹೆಚ್ಚಿನ ಫೀಸು ಕೊಡ್ತಾರೆ. ನಮ್ಮದು ಔಟ್ ಆಫ್ ಕ್ಯಾಂಪಸ್ ಪಾಠ. ವಿದ್ಯಾರ್ಥಿಗಳೆಲ್ಲ ಪರೀಕ್ಷೆಗೆ ಮಾತ್ರ ಬರುತ್ತಾರೆ”.
“ಹಾಗಾದರೆ, ಅವರು ಸರಿಯಾಗಿ ಕಲಿಯುವುದು ಹೇಗೆ?”
“ಅದು ಯಾರಿಗೆ ಬೇಕಾಗಿದೆ ಸರ್? ಅವರೆಲ್ಲ ಎಲ್ಲೆಲ್ಲೋ ಕೆಲಸ ಮಾಡುತ್ತಿರುತ್ತಾರೆ. ಇಲ್ಲಿ ರೆಗ್ಯುಲರ್ ವಿದ್ಯಾರ್ಥಿ ಎಂದು ದಾಖಲಾತಿ ಮಾಡುತ್ತಾರೆ. ಅಲ್ಲಿ ಕೆಲಸ ಮತ್ತು ಸಂಬಳವೂ ಆಯಿತು, ಇಲ್ಲಿ ಪದವಿಯೂ ಸಿಗುತ್ತದೆ. ಎರಡೂ ಕಡೆಗೆ ಲಾಭ”
“ಅದಾಯ್ತು, ಆದರೆ ತರಗತಿಗೇ ಬರದಿದ್ದರೆ ಪರೀಕ್ಷೆಯಲ್ಲಿ ಪಾಸಾಗುವುದು ಹೇಗೆ?”
“ಸರ್, ನಮ್ಮಲ್ಲಿ ಅದಕ್ಕೊಂದು ಸ್ಕೀಮ್ ಇದೆ. ಯಾರೂ ಫೇಲ್ ಆಗುವುದಿಲ್ಲ”.
“ಸ್ಕೀಮೇ? ಪರೀಕ್ಷೆಗೆ ಸ್ಕೀಮೇ?” ಎಂದು ಆಶ್ಚರ್ಯದಿಂದ ಕೇಳಿದೆ.
“ಹೌದು ಸರ್ ಮೊದಲನೆಯ ಗುಂಪಿನವರು ಮನೆಯಲ್ಲೇ ಓದಿಕೊಂಡು ಬರುತ್ತಾರೆ ಅವರಿಗೆ ಯಾರ ಸಹಾಯವೂ ಬೇಡ. ಅವರು ಪರೀಕ್ಷೆಯಲ್ಲಿ ತಮಗೆ ಬೇಕಾದ ಪುಸ್ತಕವನ್ನು ನೋಡಿಕೊಂಡು ಬರೆಯಬಹುದು. ಅದಕ್ಕೆ ಎಂಭತ್ತು ಸಾವಿರ ಫೀಸು. ಇನ್ನು ಎರಡನೆಯ ಗುಂಪಿನವರು ಯಾವ ತಯಾರಿಯೂ ಇಲ್ಲದೆ ಬರುತ್ತಾರೆ. ಅವರಿಗೆ ಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದು ತಿಳಿದಿಲ್ಲ. ಅಂಥವರಿಗೆ ನಮ್ಮ ಶಿಕ್ಷಕರು ಉತ್ತರಗಳನ್ನು ತೆಗೆದು ತೆಗೆದು ಕೊಡುತ್ತಾರೆ. ಅವರ ಫೀಸು ಒಂದು ಲಕ್ಷ. ಮೂರನೆಯವರು ಪರರಾಜ್ಯಗಳಿಂದ ಬರುತ್ತಾರೆ. ಅವರಿಗೆ ಇಂಗ್ಲೀಷಿನಲ್ಲಿ ಬರೆಯವುದಕ್ಕೇ ಬರುವುದಿಲ್ಲ. ಅಂಥವರನ್ನು ಬೇರೆ ಕೊಠಡಿಯಲ್ಲಿ ಕೂಡ್ರಿಸಿ ನಮ್ಮ ಅಧ್ಯಾಪಕರೇ ಪೇಪರ್ ಬರೆಯುತ್ತಾರೆ. ಅದಕ್ಕೆ ಒಂದೂವರೆ ಲಕ್ಷ ರೂಪಾಯಿ. ನಮ್ಮ ಸೆಂಟರಿನಿಂದ ಪರೀಕ್ಷೆಗೆ ಕುಳಿತವರು ಯಾರೂ ಫೇಲ್ ಆಗುವುದಿಲ್ಲ”.
ಇದು ಸ್ಕೀಮು. ನನ್ನ ವಿಚಾರದಂತೆ ಇದು ಪರೀಕ್ಷೆ ಪಾಸು ಮಾಡುವ ಸ್ಕೀಮ್ ಅಲ್ಲ, ಇದು ಶಿಕ್ಷಣವನ್ನು ವ್ಯವಸ್ಥಿತವಾಗಿ ಕೊಲ್ಲುವ ಸ್ಕೀಮು. ಇದು ಯಾವ ವ್ಯವಸ್ಥೆ? ಒಂದೂ ತರಗತಿಗೆ ಹೋಗದೆ ಪದವಿ ಪಡೆದು ಬಂದವರು ಹೇಗೆ ಕಲಿಸಿ ಯಾರು? ಎರಡು ವರ್ಷ ಸರಿಯಾಗಿ ಕಲಿತವರಿಗೇ ಪಾಠ ಮಾಡುವುದು ಕಷ್ಟ. ಅಂಥದರಲ್ಲಿ ಈ ಪದವಿಯ ಕಾಗದವನ್ನು ಹಿಡಿದುಕೊಂಡು ಬಂದವರು ಏನು ಮಾಡುತ್ತಾರೆ? ಅವರ ಹತ್ತಿರ ಪದವಿಯ ಕಾಗದವಿದೆ, ಜ್ಞಾನವಿಲ್ಲ. ನಾನು ಮೇಲೆ ಹೇಳಿದ ಸ್ಕೀಮು ಕೆಲವೇ ಕಾಲೇಜುಗಳಲ್ಲಿ ಇರಬಹುದು. ಆದರೆ ಇಂದು ತರಗತಿಗೆ ಬರಲೇ ಬೇಕು ಎಂದು ಒತ್ತಾಯಿಸುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸೇರುವುದಿಲ್ಲ. ಅಂಥ ಕೆಲವು ಕಾಲೇಜುಗಳು ಮುಚ್ಚಿ ಹೋಗಿವೆ. ಹಾಜರಿ ಬೇಡ ಎನ್ನುವ ಕಾಲೇಜುಗಳಲ್ಲಿ ಸೀಟುಗಳು ಭರ್ತಿಯಾಗಿವೆ. ನಾವು ಶಿಕ್ಷಣದ ಗುಣಮಟ್ಟ, ಶಿಕ್ಷಕರ ಗುಣಮಟ್ಟದಷ್ಟೇ ಎನ್ನುತ್ತೇವೆ. ಹೀಗೆ ಶಿಕ್ಷಕರ ಗುಣಮಟ್ಟ ಅಧೋಗತಿಗೆ ಇಳಿಯುತ್ತಿದ್ದರೆ ನಮ್ಮ ಶಿಕ್ಷಣದ ಗತಿ ಏನಾದೀತು? ನೆನೆಸಿಕೊಳ್ಳಲೂ ಭಯವಾಗುತ್ತದೆ.
ನನಗೆ ದಿಗಿಲಾಗುವುದೆಂದರೆ ಈ ಅನೈತಿಕ ವ್ಯವಹಾರ ಯಾರಿಗೂ ತಿಳಿದಿಲ್ಲವೇ? ವಿದ್ಯಾರ್ಥಿಗಳಿಗೆ ಗೊತ್ತು, ಕಾಲೇಜಿನ ಪ್ರಿನ್ಸಿಪಾಲರಿಗೆ ಖಂಡಿತವಾಗಿಯೂ ಗೊತ್ತು. ಮ್ಯಾನೇಜಮೆಂಟಗಳಿಗೆ ತಿಳಿಯದಿರುವುದು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳ ಶಿಕ್ಷಣ ವಿಭಾಗದ ಮುಖ್ಯಸ್ಥರುಗಳಿಗೆ, ಕುಲಪತಿಗಳಿಗೆ, ಶಿಕ್ಷಣ ಮಂತ್ರಿಗಳಿಗೆ ಇದು ತಿಳಿದೇ ಇರಬೇಕು. ತಿಳಿದಿಲ್ಲವೆಂದರೆ ಅವರು ಅತ್ಯಂತ ಅಸಮರ್ಥರಾದರೂ ಇರಬೇಕು ಇಲ್ಲವೇ ಈ ಅನಪೇಕ್ಷಿತ ವ್ಯವಹಾರದಲ್ಲಿ ಪಾಲುದಾರರಾದರೂ ಇರಬೇಕು. ಇದನ್ನು ತಡೆಯುವುದು ಕಷ್ಟವಲ್ಲ. ಗಟ್ಟಿಯಾದ ಸಂಕಲ್ಪದೊಂದಿಗೆ ಶಿಕ್ಷಣವನ್ನು ಸರಿದಾರಿಗೆ ತರಲೇಬೇಕೆಂಬ ಕ್ರಿಯಾಯೋಜನೆ ಬೇಕು.
ಈ ಪರಿಸ್ಥಿತಿಯನ್ನು ತಿಳಿದಿದ್ದ ನನಗೆ ಮುಂದೆ ಒಂದು ಶಿಕ್ಷಕರ ವಿಶಿಷ್ಟವಾದ ತರಬೇತಿ ಕೇಂದ್ರವನ್ನು ಪ್ರಾರಂಭಮಾಡಬೇಕೆಂಬ ಯೋಚನೆ ಕೊರೆಯತೊಡಗಿತು. ಶಿಕ್ಷಕರ ತರಬೇತಿಯಲ್ಲಿ ಎರಡು ವಿಧಗಳು. ಶಿಕ್ಷಕರ ಕೆಲಸಕ್ಕೆ ಅವಶ್ಯವಾದ ಪೂರ್ವ ತರಬೇತಿ. ಅದು ಬಿ.ಎಡ್. ಅಥವಾ ಡಿ.ಎಡ್ ಆಗಬಹುದು. ಆದರೆ ಈಗಾಗಲೇ ವೃತ್ತಿಯಲ್ಲಿರುವ ಶಿಕ್ಷಕರಿಗೆ ಯಾವ ವ್ಯವಸ್ಥಿತ ತರಬೇತಿಯೂ ಇರಲಿಲ್ಲ. ಎಷ್ಟೋ ಜನ ಮೂವತ್ತು ವರ್ಷಗಳ ಸೇವೆ ಸಲ್ಲಿಸಿದರೂ ಒಂದೇ ತರಬೇತಿಯೂ ಇಲ್ಲದೆ ನಿವೃತ್ತರಾಗುವ ಪರಿಸ್ಥಿತಿ ಇತ್ತು. ಇದು ಸರಿಯೆ? ಪ್ರತಿವರ್ಷ ಶಿಕ್ಷಣ ಕ್ಷೇತ್ರ ಎಷ್ಟೊಂದು ಬದಲಾವಣೆಗಳನ್ನು ಕಾಣುತ್ತಿದೆ, ವಿದ್ಯಾರ್ಥಿಗಳ ಕಲಿಕಾವಿಧಾನಗಳು ಬದಲಿಯಾಗುತ್ತಿವೆ. ಕಲಿಸುವ ವಿಧಾನಗಳು ಬದಲಾಗಬೇಕು, ತಂತ್ರಜ್ಞಾನದ ಬಳಕೆಯಾಗಬೇಕು. ಆದ್ದರಿಂದ ವೃತ್ತಿನಿರತ ಶಿಕ್ಷಕರಿಗೆ ನಿರ್ದಿಷ್ಟ ಸಮಯದಲ್ಲಿ, ಮೇಲಿಂದ ಮೇಲೆ ತರಬೇತಿ ಅತ್ಯಂತ ಅವಶ್ಯಕ.
ಹಾಗಾಗಿ ವೃತ್ತಿಪೂರ್ವ ಮತ್ತು ವೃತ್ತಿನಿರತರಿಗೆ ತರಬೇತಿ ನೀಡುವ ಸಂಸ್ಥೆಯನ್ನು ಪ್ರಾರಂಭಿಸಬೇಕೆಂಬ ಚಿಂತನೆ ದಿನದಿನಕ್ಕೆ ಬಲಿಯತೊಡಗಿತು. ಒಂದು ದಿನ ನಮ್ಮ ಸಂಸ್ಥೆಯ ಅಧ್ಯಕ್ಷರಿಗೆ ಈ ವಿಷಯ ತಿಳಿಸಿ ನನ್ನನ್ನು ಅಂತರ್‌ರಾಷ್ಟ್ರೀಯ ಶಾಲೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡೆ. ಅವರಿಗೆ ಆಘಾತ ವಾದಂತಾಯಿತು. ಯಾಕೆ ಶಾಲೆಯನ್ನು ಬಿಡುತ್ತೀರಿ ಎಂದು ಆತಂಕದಿಂದ ಕೇಳಿದರು. ಆಗ ನಾನು ಆಗಿನ ಚಿಂತನೆಯನ್ನು, ಯೋಜನೆಯನ್ನು ಅವರಿಗೆ ವಿಸ್ತಾರವಾಗಿ ತಿಳಿಸಿದೆ. ಅವರಿಗೂ ಅದು ಸರಿ ಎನ್ನಿಸಿತು. ಹಾಗಾದರೆ ನಮ್ಮ ಸಂಸ್ಥೆಯಲ್ಲಿಯೇ ಈ ಶಿಕ್ಷಕರ ತರಬೇತಿಯನ್ನು ಪ್ರಾರಂಭಿಸೋಣ, ಅದಕ್ಕೆ ನೀವೇ ನಿರ್ದೇಶಕರಾಗಬೇಕು ಎಂದು ಹೇಳಿದರು. ಅವರು ಯಾವಾಗಲೂ ತುಂಬ ಕ್ರಿಯಾಶೀಲ ವ್ಯಕ್ತಿ. ತಕ್ಷಣವೇ ಮಾತನ್ನು ಕಾರ್ಯರೂಪಕ್ಕೆ ತರುವವರು. ಅವರು ನಿರ್ಧಾರ ಮಾಡುವುದು ಕ್ಷಣದಲ್ಲೇ ಮತ್ತು ಕಾರ್ಯಮಾಡುವವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವವರು. ಇನ್ನೊಂದು ತಿಂಗಳಲ್ಲಿ ನಾನು ಶಾಲೆಯಂದ ಬಿಡುಗಡೆ ಹೊಂದಿ ಬೆಂಗಳೂರಿಗೆ ಬಂದು ಹೊಸ ಸಂಸ್ಥೆಯ ಕೆಲಸವನ್ನು ಪ್ರಾರಂಭಿಸುವುದೆಂದು ತೀರ್ಮಾನವಾಯಿತು.
ತೀರ್ಮಾನವೇನೋ ಆಯಿತು. ಆದರೆ ಕಟ್ಟಿದ ಶಾಲೆಯನ್ನು, ಅಲ್ಲಿಯ ಮಕ್ಕಳನ್ನು, ಸಹೋದ್ಯೋಗಿಗಳನ್ನು ಬಿಟ್ಟುಬರುವುದು ಭಾವನಾತ್ಮಕವಾಗಿ ಸುಲಭವಾಗಿರಲಿಲ್ಲ.