ಮತಾಂಧ ಶಕ್ತಿಗಳನ್ನು ಮಟ್ಟಹಾಕಲು ಕ್ರಮ: ಗೃಹಸಚಿವ

ಮಂಗಳೂರು
Advertisement

ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮತಾಂದ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ರಾಜ್ಯ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬುಧವಾರ ಮಂಗಳೂರಿಗೆ ಆಗಮಿಸಿದ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಪ್ರಕರಣದಲ್ಲಿ ಗಾಯಗೊಂಡಿರುವ ಆಟೋ ಚಾಲಕ ಅವರ ಯೋಗ ಕ್ಷೇಮ ವಿಚಾರಿಸಿದರು.
ದುಷ್ಕರ್ಮಿ ಶಾರೀಕ್ ಹಿನ್ನೆಲೆಯ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತ ಯಾರ ಯಾರ ಜೊತೆ ಲಿಂಕ್ ಹೊಂದಿದ್ದ, ಬೆಂಬಲ ನೀಡಿದ ಸಂಘಟನೆಗಳು ಈ ಎಲ್ಲಾ ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಶಾರೀಕ್ ಸದ್ಯ ಗಂಭೀರ ಸ್ಥಿತಿಯಲ್ಲಿದ್ದು ೮ ಮಂದಿ ವೈದ್ಯರ ನೇತೃತ್ವದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾತನಾಡುವ ಸ್ಥಿತಿಗೆ ಬಂದ ಬಳಿಕ ಆತನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದು ಸಚಿವರು ತಿಳಿಸಿದರು.
ಕೊಯಮುತ್ತೂರು, ಕನ್ಯಾಕುಮಾರಿ ಈ ಭಾಗದಲ್ಲೆಲ್ಲಾ ಸುತ್ತಾಡಿರುವ ದುಷ್ಕರ್ಮಿ ಶಾರೀಕ್ ಹಲವೆಡೆ ನೆಟವರ್ಕ್ ಹೊಂದಿರುವ ಸಾಧ್ಯತೆ ಇದೆ. ಮೊಬೈಲ್ ರಿಪೇರಿಯನ್ನು ಕಲಿತು ದುಷ್ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದುದರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹಸಚಿವರು ಹೇಳಿದರು.
ಘಚನೆಯಲ್ಲಿ ಗಾಯಗೊಂಡಿರುವ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ. ಅಲ್ಲದೆ ಆತನ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು.