ಬಾಗಲಕೋಟೆ: ಸಚಿವ ಸ್ಥಾನದ ಆಸೆಗಾಗಿ ತಮ್ಮನ್ನು ತಾವು ಮಾರಿಕೊಂಡವರು ಇಂದು ಗರತಿಯಂತೆ ಉಪದೇಶ ಮಾಡುತ್ತಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ಮುಂದುವರಿಸಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಲು ಕಾಂಗ್ರೆಸ್ಸಿನಲ್ಲಿದ್ದಾಗ ಏನೆಲ್ಲ ಮಾಡಿದ್ದಾರೆ ಎಂಬುದನ್ನು ತೆರೆದಿಟ್ಟರೆ ನನ್ನ ಬಾಯಿಯೇ ಹೊಲಸಾಗುತ್ತದೆ. ಅದಕ್ಕೆ ನಾನು ಸಿದ್ಧನಿಲ್ಲ ಎಂದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿದ್ದಾಗ ಬಿ.ಸಿ. ಪಾಟೀಲ್ ಮಹಿಳೆಯರಿಂದ ಚಪ್ಪಲಿ, ಪೊರಕೆ ಸೇವೆ ಮಾಡಿಸಿಕೊಂಡಿದ್ದು ಯಾಕೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.