ಮಂಗಳೂರು ದಕ್ಷಿಣದಲ್ಲಿ ಆರ್. ಪದ್ಮರಾಜ್‌ಗೆ ʼಕೈʼಗೆ ಟಿಕೆಟ್ ಸಾಧ್ಯತೆ

ಆರ್. ಪದ್ಮರಾಜ್‌
Advertisement

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗುರು ಬೆಳದಿಂಗಳು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕುದ್ರೋಳಿ ಶ್ರೀ ಕ್ಷೇತ್ರ ಗೋಕರ್ಣನಾಥದ ಆಡಳಿತ ಮಂಡಳಿ ಕೋಶಾಧಿಕಾರಿ, ನ್ಯಾಯವಾದಿಯೂ ಆಗಿರುವ ಆರ್. ಪದ್ಮರಾಜ್ ಅವರಿಗೆ ದೊರೆಯುವ ಸಾಧ್ಯತೆಗಳು ಹೆಚ್ಚಾಗಿದೆ. ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅವರನ್ನು ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಅದರಂತೆ ಅವರು ಭಾನುವಾರ ಸಂಜೆ ತೆರಳಿದ್ದಾರೆ.
ಕಾಂಗ್ರೆಸ್ ಪಕ್ಷವು ಮಂಗಳೂರು ದಕ್ಷಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ನಿರಂತರವಾಗಿ ಕ್ರೈಸ್ತ್‌ ಧರ್ಮದವರಿಗೆ ನೀಡುತ್ತಿದ್ದು, ಈ ಸಲವೂ ಈ ಕ್ಷೇತ್ರದಿಂದ ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಟಿಕೆಟ್ ಆಕಂಕ್ಷಿಯಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 2 ವಿಧಾನಸಭಾ ಕ್ಷೇತ್ರವನ್ನು ಕ್ರೈಸ್ತರಿಗೆ ನೀಡುತ್ತಿದ್ದು, ಅದರಲ್ಲಿ ಮಂಗಳೂರು ದಕ್ಷಿಣವೂ ಒಂದು. ಈ ಸಲ ಜಾತಿ-ಧರ್ಮವನ್ನು ನೋಡದೇ, ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ನಿಟ್ಟಿನಲ್ಲಿ ಪದ್ಮರಾಜ್ ಅವರ ಹೆಸರು ಮುಂಚೂಣಿಗೆ ಬಂದಿದೆ.
ಉಳಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉದ್ಯಮಿ ಅಶೋಕ್ ರೈ ಹಾಗೂ ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ಹೆಸರು ಇದೆ. ಈ ಪೈಕಿ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ದೊರೆತರೂ ಅಚ್ಚರಿ ಇಲ್ಲ. ಇಲ್ಲಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಕಾವು ಹೇಮನಾಥ ಶೆಟ್ಟಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.
ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಜಿದ್ದಿಗೆ ಬಿದ್ದಿರುವ ಮಾಜಿ ಶಾಸಕ ಮೋಯಿದಿನ್ ಬಾವಾ ಹಾಗೂ ಕೆಪಿಸಿಸಿ ಮುಂದಾಳು ಇನಾಯತ್ ಅಲಿ ಪೈಕಿ ಟಿಕೆಟ್ ಇನಾಯತ್ ಅಲಿ ಅವರಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭೆಗಳ ಪೈಕಿ 5 ಕ್ಷೇತ್ರಗಳ ಟಿಕೆಟನ್ನು ಈಗಾಗಲೇ ಘೋಷಿಸಿದ್ದು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಟಿಕೆಟ್ ನೀಡುವುದು ಕಗ್ಗಂಟಾಗಿತ್ತು.