ಮಂಗಳೂರು: ನಗರದಲ್ಲಿ ನಿಷೇದಿತ ಮಾದಕ ದ್ರವ್ಯ ಬಳಕೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದೆ ವಿದ್ಯಾರ್ಥಿಗಳನ್ನು ಮತ್ತು ವೈದ್ಯರನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ವ್ಯಸನಿಗಳ ಪುನರ್ವಸತಿಗೆ ಆದ್ಯತೆ ಕೊಡದೆ ಅವರ ಮಾನಹಾನಿಗೆ ಆದ್ಯತೆ ನೀಡಲಾಗಿದೆ ಎಂದು ವಕೀಲ ಹಾಗೂ ಮಂಗಳೂರು ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಮನೋರಾಜ್ ರಾಜೀವ ಮತ್ತು ವಿಧಿ ವಿಜ್ಞಾನ ತಜ್ಞ ಡಾ. ಮಹಾಬಲೇಶ ಶೆಟ್ಟಿ ಆಪಾದಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ದ್ರವ್ಯ ವ್ಯಸನಿಗಳನ್ನು ಪೆಡ್ಲರ್‌ಗಳೆಂದು ಬಿಂಬಿಸಲಾಗಿದೆ. ಅವರ ಭಾವಚಿತ್ರ, ಪೋಷಕರ ವಿವರಗಳನ್ನು ಮುದ್ರಣ ಮಾಡುವ ಮೂಲಕ ವಿದ್ಯಾರ್ಥಿಗಳು, ಪೋಷಕರು, ವೈದ್ಯರನ್ನು ಅವಮಾನಿಸಲಾಗಿದೆ. ಕಾನೂನು ಜಾರಿ ಏಜೆನ್ಸಿಗಳು ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಮಾದಕ ದ್ರವ್ಯ ಸೇವಿಸಿದ್ದರೆ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು. ಆದರೆ ಅವರನ್ನು ಬಂಧನದಲ್ಲಿಡಲಾಯಿತು. ಈ ಪ್ರಕರಣದಲ್ಲಿ ಅಮಾಯಕರನ್ನು ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಡ್ರಗ್ ಪೆಡ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕಾನೂನು ಜಾರಿ ಏಜೆನ್ಸಿಗಳು ಡ್ರಗ್ ಪೆಡ್ಲರ್‌ಗಳು ಮತ್ತು ಮಾದಕ ದ್ರವ್ಯ ವ್ಯಸನಿಗಳನ್ನು ಸಮಾನವಾಗಿ ಪರಿಗಣಿಸಬಾರದು ಎಂದರು.
ಮಾದಕ ದ್ರವ್ಯ ವ್ಯಸನಿಗಳನ್ನು ಬಂಧಿಸಿದರೆ ಅವರು ಆ ವ್ಯಸನವನ್ನು ತೊರೆಯುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಮುಖ್ಯ ಆರೋಪಿ ಬಳಿಯಲ್ಲದೆ ಬೇರೆ ವಿದ್ಯಾರ್ಥಿಗಳ ಬಳಿಯಾಗಲಿ, ವೈದ್ಯರ ಬಳಿಯಲ್ಲಾಗಲಿ ಗಾಂಜಾ ದೊರೆತಿಲ್ಲ ಎಂಬುದರತ್ತ ಗಮನ ಸೆಳೆದರು. ಈ ಪ್ರಕರಣದಲ್ಲಿ ಶಾಸಕರಾಗಲಿ, ಸಂಸದರಾಗಲಿ ಯಾಕೆ ಮಧ್ಯಪ್ರವೇಶ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.