ದಾವಣಗೆರೆ: ಕರ್ನಾಟಕದ ಶಾಸಕರು, ಭ್ರಷ್ಟಾಚಾರ ಮಾಡಿ ಅವರ ಮನೆಗಳಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕರೂ ರಾಜ್ಯ ಸರ್ಕಾರ ಅವರನ್ನು ಬಂಧಿಸದೆ ಇರಿಸಿದೆ. ಆದರೆ, ಆಮ್ ಆದ್ಮಿ ಪಕ್ಷ ಶೂನ್ಯ ಭ್ರಷ್ಟಾಚಾರದಲ್ಲಿ ಅಧಿಕಾರ ನಡೆಸಲು ಒತ್ತು ನೀಡಿದ್ದು, ನನ್ನ ಪುತ್ರನೇ ಭ್ರಷ್ಟಾಚಾರ ನಡೆಸಿದರೂ ಅವನನ್ನು ಜೈಲಿಗೆ ಕಳಿಸುತ್ತೇನೆ ಎಂದು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಮಾಣಿಕ ಪಕ್ಷವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷ ಜನಪರ ಆಡಳಿತ ನೀಡದೆ, ಅಭಿವೃದ್ಧಿಗೆ ಇಂಬು ನೀಡದೆ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆ ಎಂದು ದೂರಿದರು.
ನಮ್ಮ ಪಕ್ಷ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ಅವರು ಸ್ವಪಕ್ಷದ ಶಾಸಕರೊಬ್ಬರು ಭ್ರಷ್ಟಾಚಾರ ಮಾಡಿದ ಕಾರಣ ಅವರನ್ನು ಸ್ವತಃ ಮುಂದೆ ನಿಂತು ಜೈಲಿಗೆ ಅಟ್ಟಿದರು. ಚನ್ನಗಿರಿಯ ಶಾಸಕರ ಪುತ್ರನ ಮನೆಯಲ್ಲಿ ೮ ಕೋಟಿ ರೂ., ಹಣ ಸಿಕ್ಕಿದೆ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಹಾಗಿದ್ದರೂ ಸಹ ಇದುವರೆಗೂ ಶಾಸಕರನ್ನು ಮತ್ತವರ ಮಗನನ್ನು ಬಂಧಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ. ನಮ್ಮ ಪಕ್ಷ ಶೂನ್ಯ ಭ್ರಷ್ಟಾಚಾರದ ಪರವಾಗಿ ನಿಂತಿದೆ ಎಂದರು.