ಹಾವೇರಿ: ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಆರೋಗ್ಯ ಸರಿಯಿಲ್ಲ. ಅವರಿಗೆ ಆಕ್ಸಿಜನ್ಯುಕ್ತ (ಆಮ್ಲಜನ ಮಾಸ್ಕ್) ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಶನಿವಾರ ಇಲ್ಲಿ ತಿಳಿಸಿದರು.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜೋಶಿ ಈ ಮಾಹಿತಿ ನೀಡಿದರು.
ಪೂರ್ವನಿಗದಿತ ಕಾರ್ಯಕ್ರಮದಂತೆ ಭೈರಪ್ಪನವರು ಸಮ್ಮೇಳನದಲ್ಲಿ, ನಾಡ ಗೀತೆಯ ವಿಶೇಷತೆ ಕುರಿತು ಪ್ರಧಾನ ಉಪನ್ಯಾಸವನ್ನು ನೀಡಬೇಕಾಗಿತ್ತು. ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ' (ಕುವೆಂಪು) ಕವನ ಕುರಿತು ಭೈರಪ್ಪನವರ ಮಾತುಗಳನ್ನು ಆಲಿಸಲು ಸಹಸ್ರಾರು ಜನ ಕಾತರದಿಂದ ಕಾದದಿದ್ದರು. ರಾಜ್ಯ-ದೇಶದ ಮಾಧ್ಯಮ ಪ್ರಮುಖರೂ ಕೂಡ ಇದಕ್ಕಾಗಿಯೇ ಉಪಸ್ಥಿತರಿದ್ದರು.
ಆದರೆ ಭೈರಪ್ಪನವರಿಗೆ ಆರೋಗ್ಯ ಸರಿಯಿಲ್ಲ. ಅವರಿಗೆ ಆಮ್ಲಜನಕ ಹಾಕಿದ್ದಾರೆ (ಅಳವಡಿಸಿದ್ದಾರೆ). ಈ ಆಮ್ಲಜನ ಮಾಸ್ಕ್ ತೆರೆದು ವಿಶೇಷ ಸಂದೇಶವನ್ನು ಭೈರಪ್ಪನವರು ರವಾನಿಸಿದ್ದಾರೆ’ ಎಂದು ಜೋಶಿ ಪ್ರಕಟಿಸಿದರು.
ಭೈರಪ್ಪ ಸಂದೇಶ…
ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಸಕಾಲಿಕ ಹಾಗೂ ಅತ್ಯುತ್ತಮವಾದ ನಾಡಗೀತೆ; ಅರ್ಥಪೂರ್ಣ ಗೀತೆ ಕೂಡ ಇದಾಗಿದೆ ಎಂದು ಭೈರಪ್ಪ ಸಂದೇಶದಲ್ಲಿ ಹೇಳಿದ್ದಾರೆ.
ದೇಶದ ಬಹುತೇಕ ಭಾಷೆಗಳಿಗೆ ಸಂಸ್ಕೃತವೇ ಮಾತೃಭಾಷೆಯಾಗಿದ್ದು, ಕನ್ನಡವೂ ಈ ಮಾತಿಗೆ ಹೊರತಲ್ಲ. ಸಾಹಿತ್ಯ ಪದಬಂಢಾರವಲ್ಲದೇ, ಆಧುನಿಕ ಜ್ಞಾನ ವಿಜ್ಞಾನದ ಶಾಖೆಗಳ ಪರಿಭಾಷೆಯೂ ಸಂಸ್ಕೃತದಿಂದ ಪ್ರಭಾವಿತ. ಸಂಸ್ಕೃತದ ಮಕ್ಕಳಾದ ಕನ್ನಡ ಮೊದಲಾದ ದೇಶ ಭಾಷೆಗಳು ಈಗ ಬಹು ಎತ್ತರಕ್ಕೆ ಬೆಳೆದಿವೆ. ತನ್ನ ತಾಯಿಯಾದ ಸಂಸ್ಕೃತ ಮಾತೆಯನ್ನು ಆರೈಕೆ ಮಾಡುತ್ತಿವೆ ಎಂದಿದ್ದಾರೆ. ಭೈರಪ್ಪನವರ ಆಪ್ತರೂ ಆಗಿರುವ ಸಾಹಿತಿ ಡಾ.ಪ್ರಧಾನ ಗುರುದತ್ತ ಸಂದೇಶವನ್ನು ಓದಿದರು.