ಭಿನ್ನ ಕೋಮಿನ ಜೋಡಿ ಪ್ರಯಾಣ-ಬಜರಂಗದಳದಿಂದ ತಡೆ

Advertisement

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಭಿನ್ನಕೋಮಿನ ಯುವಕ ಹಾಗೂ ಯುವತಿ ಜತೆಯಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ತಂಡವೊಂದು ಕಳೆದ ರಾತ್ರಿ ಸ್ಲೀಪರ್ ಕೋಚ್ ಬಸ್ಸನ್ನು ತಡೆದ ಘಟನೆ ಮಾಣಿ ಸಮೀಪದ ದಾಸಕೋಡಿಯಲ್ಲಿ ನಡೆದಿದೆ. ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ಪ್ರಯಾಣಿಸುತ್ತಿದ್ದಾಳೆ ಎಂದು ಆರೋಪಿಸಿ ಕಲ್ಲಡ್ಕ ವಿಹಿಂಪ, ಬಜರಂಗದಳ ಸಂಘಟನೆಯ ಕಾರ್ಯಕರ್ತರು ಬಸ್ಸನ್ನು ತಡೆದು ಅವರಿಬ್ಬರನ್ನೂ ಬಸ್ಸಿನಿಂದ ಇಳಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಸಂದರ್ಭದಲ್ಲಿ ಯುವತಿ ಹಾಗೂ ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ಕುರಿತು ಪ್ರಕರಣ ದಾಖಲಾಗಿಲ್ಲ.