ಕಾರವಾರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕ್ಯಾದಗಿಯ ಪದ್ಮಾವತಿ ಹಸ್ಲಾರ್ ಎನ್ನುವವರ ಮನೆಯ ಗೋಡೆ ಕುಸಿದು, ಅವರ ಮಗ ಚಂದ್ರಶೇಖರ ಹಸ್ಲರ್ (23) ಸಾವನ್ನಪ್ಪಿದ್ದಾನೆ. ಕುಸಿದ ಗೋಡೆ ಮಲಗಿದ್ದ ಯುವಕನ ಮೇಲೆ ಬಿದ್ದ ಪರಿಣಾಮ ಚಂದ್ರಶೇಖರ ತೀವ್ರ ಗಾಯಗೊಂಡಿದ್ದ. ತಕ್ಷಣ ಸಿದ್ದಾಪುರ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಮನೆ ಕುಸಿದ ಸ್ಥಳಕ್ಕೆ ತಹಶೀಲ್ದಾರ ಸಂತೋಷ ಭಂಡಾರಿ, ಆರ್ಐ ಯಶವಂತ ಅಪ್ಪಿನಬೈಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಮೂರು-ನಾಲ್ಕು ದಿನದಿಂದ ತಾಲೂಕಿನಲ್ಲಿ ಭಾರಿ ಮಳೆ ಬೀಳುತ್ತಿದ್ದು, ರಭಸದ ಗಾಳಿಯೂ ಬೀಸುತ್ತಿದೆ. ಇದರಿಂದ ಇನ್ನಷ್ಟು ಅನಾಹುತವಾಗುವ ಭೀತಿ ಎದುರಾಗಿದೆ.