ಮಂಗಳೂರು: ನಗರದ ಸಿಸಿಬಿ ಪೊಲೀಸರು ಭಾರೀ ಗಾಂಜಾ ದಂಧೆಯನ್ನು ಬಯಲು ಮಾಡಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್‌ಗಳು ಭಾಗಿಯಾಗಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ದೇರಳಕಟ್ಟೆಯ ಯೆನೇಪೋಯಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರು ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. 4 ವೈದ್ಯಕೀಯ ವಿದ್ಯಾರ್ಥಿನಿಯರು, 2 ವೈದ್ಯರು, 2 ವಿದ್ಯಾರ್ಥಿಗಳು ಸೇರಿ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ಪೆಡ್ಲರ್‌ಗಳು ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರ ಬಂಧನ ಮಾಡಲಾಗಿದೆ. ಗಾಂಜಾ ಸೇವನೆ ಹಾಗೂ ಗಾಂಜಾ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಯು.ಕೆ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ(38) ಎಂಬಾತ ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ರೂಂ ಬಾಡಿಗೆ ಪಡೆದು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಡ್ರಗ್ ಪೆಡ್ಲಿಂಗ್ ಕೇಸ್‌ನಲ್ಲಿ ರಾಮ್ ಜೀ ವಶಕ್ಕೆ ಪಡೆದಾಗ ಮತ್ತಷ್ಟು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆತನ ಮಾಹಿತಿ ಆಧಾರದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯರು, ವೈದ್ಯರನ್ನು ವಶಕ್ಕೆ ಪಡೆಯಲಾಗಿದೆ.
ವಿದ್ಯಾರ್ಥಿನಿಯರಾದ ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23) ಹಾಗೂ ವೈದ್ಯ ಡಾ.ಸಮೀರ್(32), ಮಣಿಮಾರನ್ ಮುತ್ತು(28) ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34) ಬಂಧನವಾಗಿದೆ. ವಿದ್ಯಾರ್ಥಿಗಳಾದ ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧಿಸಲಾಗಿದೆ. ಎರಡು ಕೆ.ಜಿ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.