ನವಲಗುಂದ: ಮಳೆ ಬಂದಾಗೊಮ್ಮೆ ನವಲಗುಂದ ಭಾಗದ ಬಹುತೇಕ ಗ್ರಾಮಗಳ ಜನರು ಕೈಯಲ್ಲಿ ಬಕೆಟ್ ಹಿಡಿದು ಮನೆಯೊಳಕ್ಕೆ ನುಗ್ಗಿದ ನೀರನ್ನು ಹೊರ ಹಾಕುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಇದೆ ಪರಿಸ್ಥಿತಿ ಇಂದು ಸಹ ಮುಂದುವರೆದಿದ್ದು, ನವಲಗುಂದ ತಾಲ್ಲೂಕಿನ ಅರೆಕುರಹಟ್ಟಿ ಗ್ರಾಮದಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ.
ಯಮನೂರ ಗ್ರಾಮ ಪಂಚಾಯತ್‌ಗೆ ಒಳಪಡುವ ಅರೆಕುರಹಟ್ಟಿ ಗ್ರಾಮದ ಪರಿಸ್ಥಿತಿ ಪ್ರತಿ ವರ್ಷವೂ ಇದೆ ರೀತಿಯಾಗಿದೆ. ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ನೀರು ಹರಿದು ಹೋಗಲು ಜಾಗವಿಲ್ಲದೆ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಓಣಿಯಲ್ಲಿಯೂ ಸಹ ನೀರು ನಿಂತಿದ್ದು, ಜನ ಜೀವನ ಅತಂತ್ರವಾಗಿದೆ.
ಪ್ರತಿ ಬಾರಿಯೂ ಇದೇ ಪರಿಸ್ಥಿತಿಗೆ ಬೇಸತ್ತ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
