ನವದೆಹಲಿ: ಭಾರತದ ಗಡಿ ಭಾಗದಲ್ಲಿ ಚೀನಾ ಸೈನಿಕರ ಉದ್ಧಟತನ ವರ್ತನೆ ಕುರಿತು ಚರ್ಚೆಗೆ ಸಂಸತ್‍ನಲ್ಲಿ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. ನಂತರ ಸಂಸತ್‍ನಲ್ಲೂ ಸಭಾತ್ಯಾಗದ ಮೂಲಕ ಒತ್ತಡ ಹೇರುವ ಪ್ರಯತ್ನಗಳಾಗಿವೆ.
ಸಭೆಯಲ್ಲಿ ಮಾತನಾಡಿರುವ ಸೋನಿಯಾ ಗಾಂಧಿ, ಸರ್ಕಾರದ ಹಠಮಾರಿ ಧೋರಣೆಯಿಂದ ಚೀನಾ ಗಡಿ ವಿಷಯ ಸಂಸತ್‍ನಲ್ಲಿ ಚರ್ಚೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗಡಿಯಲ್ಲಿನ ಪರಿಸ್ಥಿತಿ ಏನು ಎಂಬ ಬಗ್ಗೆ ಸಂಸತ್ ಮತ್ತು ಸಾರ್ವಜನಿಕರು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಕೇಂದ್ರ ಸರ್ಕಾರ ಎಲ್ಲಾ ಮಾಹಿತಿಗಳನ್ನು ಮುಚ್ಚಿಡುತ್ತಿದೆ. ಸರ್ಕಾರ ಈ ರೀತಿ ಮರೆ ಮಾಚುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸಭೆಯ ಬಳಿಕ ಸಂಸತ್ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿ ಪಕ್ಷಗಳು ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಅರುಣಾಚಲ ಪ್ರದೇಶದ ಗಡಿ ಭಾಗವಾಗಿರುವ ತವಾಂಗ್‍ನಲ್ಲಿ ಚೀನಾ ಸೈನಿಕರು ಒಳನುಸಳಲು ಯತ್ನಿಸಿದರು. ನಮ್ಮ ಸೈನಿಕರು ಅದನ್ನು ತಡೆದಿದ್ದಾರೆ. ಈ ಕುರಿತು ಚರ್ಚೆಗೆ ಸಂಸತ್‍ನಲ್ಲಿ ನಾವು ಹಲವು ಬಾರಿ ನೋಟಿಸ್ ನೀಡಿದ್ದೇವೆ. ಆದರೆ ಸರ್ಕಾರ ಅವಕಾಶ ನೀಡುತ್ತಿಲ್ಲ. ಆರಂಭದ ದಿನ ಕೇಂದ್ರ ರಕ್ಷಣಾ ಸಚಿವರು ಉತ್ತರ ಹೇಳಿ ಹೋಗಿದ್ದಾರೆ. ಅದು ಏಕಮುಖವಾಗಿ ಉಳಿದಿದೆ. ಚರ್ಚೆಯಾಗದೆ ಇದ್ದರೆ ಸಂಸತ್‍ಗೆ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ. ಹಿರಿಯ ನಾಯಕ ಪಿ.ಚಿದಂಬರಂ ಮಾತನಾಡಿ, ಸಂಸತ್‍ನಲ್ಲಿ ವಿಷಯ ಚರ್ಚೆಯಾಗಲೇಬೇಕಿದೆ. ನಾವು ಮಿಲಿಟರಿ ರಹಸ್ಯಗಳನ್ನು ಕೇಳುತ್ತಿಲ್ಲ. ಚೀನಾ ಸೈನಿಕರು ದೇಶದ ಗಡಿಯ ಒಳಗೆ ನುಸಳಿದ್ದೇಗೆ ಎಂದು ತಿಳಿದುಕೊಳ್ಳ ಬಯಸುತ್ತೇವೆ ಎಂದಿದ್ದಾರೆ.
ಚೀನಾದ ಆಕ್ರಮಣಕ್ಕೆ ಭಾರತ ಸಮರ್ಥ ಉತ್ತರ ನೀಡಿದೆಯೇ ? ಚೀನಾದ ಆಕ್ರಮಣವನ್ನು ತಡೆಯಲು ನಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ. ಆಕ್ರಮಣಗಳನ್ನು ತಡೆಯಲು ನಮ್ಮಲ್ಲಿ ಯಾವ ಹಂತದ ಪೂರ್ವ ತಯಾರಿಯಿದೆ. ಈ ಮೊದಲು ಗಾಲ್ವಾನ್ ಕಣಿವೆಯಲ್ಲಿನ ದಾಳಿಯ ಬಳಿಕ ಭಾರತೀಯ ಸೇನೆ ಮತ್ತು ಚೀನಾದ ಪ್ರಿಪಲ್ಸ್ ಲಿಬರೇಷನ್ ಸೇನೆಯ ನಡುವೆ ನಡೆದ 16 ಸುತ್ತಿನ ಮಾತುಕತೆಗಳ ಸಾಧನೆ ಏನು ? ಇತ್ತೀಚೆಗೆ ಬಾಲಿಯಲ್ಲಿ ನಡೆದ ಜಿ-20 ಶೃಂಗ ರಾಷ್ಟ್ರಗಳ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಷಿ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾದರೂ ಏನನ್ನು ಎಂದು ತಿಳಿದುಕೊಳ್ಳಲು ಬಯಸುವುದಾಗಿ ಹೇಳಿದರು.