ಭಾರತ್ ಜೋಡೋ ಯಾತ್ರೆ ವೇಳೆ ವಿದ್ಯುತ್ ಅವಘಡ

ಭಾರತ್ ಜೋಡೋ
Advertisement

ಬಳ್ಳಾರಿ: ಭಾರತ್ ಜೋಡೋ ಯಾತ್ರೆ ವೇಳೆ ಧ್ವಜಕ್ಕೆ ಹಾಕಲಾಗಿದ್ದ ಕಬ್ಬಿಣದ ರಾಡೊಂದು ವಿದ್ಯುತ್ ತಂತಿಗೆ ತಗುಲಿ ಐವರಿಗೆ ಗಾಯಗಳಾದ ಘಟನೆ ತಾಲ್ಲೂಕಿನ ಮೋಕಾ ಗ್ರಾಮದ ದೊಡ್ಡ ಕಾಲುವೆ ಬಳಿ ಸಂಭವಿಸಿದೆ.
ಘಟನೆಯಲ್ಲಿ ಕಾಂಗ್ರೆಸ್ ಮುಖಂಡ, ಮೋಕಾ ಗ್ರಾಪಂ ಅಧ್ಯಕ್ಷ ರಾಮಣ್ಣ, ಮುಖಂಡರಾದ ದೊಡ್ಡಪ್ಪ, ಸಂತೋಷ್, ಪಂಪನಗೌಡ ಮತ್ತು ಇನ್ನೊಬ್ಬರಿಗೆ ವಿದ್ಯುತ್ ಸ್ಪರ್ಶದ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಬೆಳಗ್ಗೆ ಸಂಗನಕಲ್ಲಿನಿಂದ ಆರಂಭವಾದ ಯಾತ್ರೆ ೧೦ ಗಂಟೆ ವೇಳೆಗೆ ಮೋಕಾ ಪ್ರವೇಶಿಸಿತು. ಈ ವೇಳೆ ಕಬ್ಬಿಣದ ರಾಡಿಗೆ ಸಿಕ್ಕಿಸಿದ್ದ ಕಾಂಗ್ರೆಸ್ ಧ್ವಜ ಹಿಡಿದ ವ್ಯಕ್ತಿ ಧ್ವಜವನ್ನು ಹಾರಿಸಲು ಅಲ್ಲಾಡಿಸಿದಾಗ ಅದು ನೇರ ವಿದ್ಯುತ್ ತಂತಿಗೆ ತಗುಲಿದೆ. ಈ ವೇಳೆ ರಾಮಣ್ಣ ಹೆಚ್ಚಿನ ಅವಘಡ ಆಗದೇ ಇರಲಿ ಎಂದು ಕಬ್ಬಿಣದ ರಾಡನ್ನು ವಿದ್ಯುತ್ ತಂತಿಯಿಂದ ಬಿಡಿಸಲು ಹೋದಾಗ ವಿದ್ಯುತ್ ತಗುಲಿ ಹೆಚ್ಚಿನ ಗಾಯಗಳಾಗಿವೆ. ಅವರು ಸದ್ಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಎಲ್ಲರಿಗೂ ಸಾಂತ್ವನ ಹೇಳಿದರು. ಜೊತೆಗೆ ತಲಾ 1 ಲಕ್ಷ ರೂ. ಪರಿಹಾರ ಧನ ಘೋಷಿಸಿದರು. ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಉಜೊತೆಗಿದ್ದರು.