ಬೆಂಗಳೂರು: ಭಾರತ ದೇಶ ಒಗ್ಗಟ್ಟಿನಿಂದ ಬಲಿಷ್ಟವಾಗಿ ಬೆಳೆಯುತ್ತಿರುವಾಗ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
61ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2022 ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತ ಜೋಡೋ ಯಾತ್ರೆಯ ಅರ್ಥ ಏನು? ಭಾರತ ಈಗಾಗಲೇ ಒಕ್ಕೂಟವಾಗಿ, ಒಗ್ಗಟ್ಟಾಗಿ ಮುನ್ನಡೆಯುತ್ತಿದೆ. ಇದನ್ನು ಮತ್ತೆ ಜೋಡಿಸುವ ಪ್ರಮೇಯ ಇಲ್ಲ. ಇಡೀ ದೇಶ ಒಗ್ಗಟ್ಟಾಗಿ ಭಾರತ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಯನ್ನು ಸಾಧಿಸುತ್ತಿದೆ. ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ. ಅಮೆರಿಕಾ ಸೇರಿದಂತೆ ಜಿ7 ದೇಶಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಭಾರತ ದೇಶ ಕನಿಷ್ಟ ಶೇ. 7 ಅಭಿವೃದ್ಧಿಯನ್ನು ಕಾಯ್ದುಕೊಂಡು ಬಂದಿದೆ. ರಾಹುಲ್ ಗಾಂಧಿಯವರು ಮೊದಲ ಮಿಸೈಲ್ ವಿಫಲಗೊಂಡಿದ್ದು, ಈಗ ಮತ್ತೊಮ್ಮೆ ಲಾಂಚ್ ಮಾಡುವ ಪ್ರಯತ್ನದಲ್ಲಿದ್ದಾರೆ. ಅದು ಬಿಟ್ಟರೆ ಇವರ ಜೋಡೋ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದರು.