ಮಂಗಳೂರು: ಯಾಕೂಬ್ ಮೆಮನ್, ಅಫ್ಜಲ್ ಗುರು, ಝಾಕೀರ್ ನಾಯ್ಕ್ ಸಹಿತ ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಅನುಕಂಪ ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಕಂಟಕವಾಗಿದ್ದ ಪಿಎಫ್‌ಐ ಸಂಘಟನೆಯನ್ನು ಬಿಜೆಪಿ ಸರಕಾರ ನಿಷೆಧಿಸಿದೆ. ಆದರೆ, ಕರ್ನಾಟಕದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿತ್ತು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆರೋಪಿ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತಳೆದಿದ್ದು, ಆತನನ್ನು ಅಮಾಯಕ ಎಂದು ಬಿಂಬಿಸಿದೆ. ಕಾಂಗ್ರೆಸ್ ಮುಖಂಡರೊಬ್ಬರು ಆರೋಪಿಯನ್ನು ‘ಬ್ರದರ್’ ಎಂದು ಸಂಬೋಧಿಸಿದ್ದಾರೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ಆಗಿದ್ದು, ಭಯೋತ್ಪಾದನೆ ಗಣನೀಯವಾಗಿ ಇಳಿಮುಖಗೊಂಡಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನ, ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಇಂದು ಬಿಜೆಪಿ ಮಾತ್ರ ಭರವಸೆಯಾಗಿದೆ ಎಂದರು.
ರಾಜ್ಯದಲ್ಲಿ ಶೇ.೪೦ ಕಮಿಷನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಲಂಚ ಪಡೆಯುವುದು ಮಾತ್ರವಲ್ಲ ಲಂಚ ನೀಡುವುದೂ ಅಪರಾಧ. ಲಂಚ ನೀಡಿದವರು, ಪಡೆದವರ ಹೆಸರು, ದಾಖಲೆ ಇದ್ದರೆ ಅದನ್ನು
ಮುಚ್ಚಿಡುವುದೂ ಅಪರಾಧ. ಲೋಕಾಯುಕ್ತವನ್ನು ಮುಚ್ಚಿದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ. ಕೇಂದ್ರದಿಂದ ನೀಡಿದ ಒಂದು ರೂ.ವಿನಲ್ಲಿ ಫಲಾನುಭವಿಗೆ ೧೫ ಪೈಸೆ ಮಾತ್ರ ತಲುಪುತ್ತದೆ ಎಂದು ಕಾಂಗ್ರೆಸ್‌ನ ಮಾಜಿ ಪ್ರಧಾನಿಯೊಬ್ಬರು ಹೇಳಿದ್ದರು. ಕಾಂಗ್ರೆಸ್ ಸರಕಾರ ೮೫ ಪರ್ಸಂಟೇಜ್ ಸರಕಾರ ಎಂಬುದನ್ನು ಅವರೇ ಒಪ್ಪಿಕೊಂಡಿದ್ದರು ಎಂದರು.
ಲವ್ ಜಿಹಾದ್ ಎಂಬ ಪದವನ್ನು ಆರ್‌ಎಸ್‌ಎಸ್, ಬಿಜೆಪಿ ಸೃಷ್ಟಿಸಿಲ್ಲ. ಕೇರಳ ಪೊಲೀಸರ ಮಾಹಿತಿ ಆಧರಿಸಿ ಅಲ್ಲಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರೇ ಹೇಳಿದ್ದರು. ಅಝಾನ್ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಅದೇಶ ನೀಡಿದೆ. ಮುಸ್ಲಿಂ ರಾಷ್ಟ್ರ ಗಳಾದ ಸೌದಿ ಅರೇಬಿಯಾ ಮತ್ತು ಇಂಡೋನೇಷ್ಯಾ ಸ್ಪೀಕರನಲ್ಲಿ ಆಝಾನ್ ಕೂಗುವುದನ್ನು ನಿಷೇಸಲಾಗಿದೆ. ಆಝಾನ್ ವಿಚಾರವನ್ನು ನಮ್ಮಲ್ಲಿ ರಾಜಕೀಯ ವಿಚಾರವಾಗಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.