ಭಗವಂತ ಪರಮಕಾರಣಿಕ

ಗುರುಬೋಧೆ
Advertisement

ಮಾನವ ಸುದೀರ್ಘವಾದ ಚಿಂತನೆಯ ಫಲ ಆನಂದದ ಅನ್ವೇಷಣೆ.
ಸಂಪೂರ್ಣವಾದ ನಿರಂತರವಾದ ಆನಂದಕ್ಕಾಗಿ ಬಿಡುಗಡೆಯ ಬಯಕೆ ಮುಖ್ಯವೆನಿಸುತ್ತದೆ. ಸಾಂಸಾರಿಕ ದುಃಖ ದುಮ್ಮಾನಗಳ ಹಾಗೂ ಭವ ಬಂಧನದ ಬಿಡುಗಡೆಯ ಬಯಕೆಯಿಂದ ಅವಿರಳಾನಂದವನ್ನು ಹೊಂದಲು ಇಚ್ಛಿಸಿ ಪರಿಪೂರ್ಣತ್ವದ ಗುರಿಯನ್ನು ಉತ್ತಮ ಸಾಧಕನು ಮುಟ್ಟಲು ಬಯಸುತ್ತಾನೆ.
ವಸ್ತುತಃ ಆನಂದದ ಅನ್ವೇಷಣೆ, ಬಂಧನದಿಂದ ಬಿಡುಗಡೆಯ ಬಯಕೆ, ಹಾಗೂ ಪರಿಪೂರ್ಣತ್ವದ ಗುರಿ ಇವು ಮೂರು ಅಭಿನ್ನವಾಗಿದೆ. ಇವು ಒಂದನ್ನೊಂದು ಆಶ್ರಯಿಸಿವೆ. ಇವುಗಳ ಸಾಕ್ಷಾತ್ಕಾರಕ್ಕೆ ತತ್ವ ಆಚರಣೆ ಮತ್ತು ಸಿದ್ಧಾಂತಗಳ ಸಮನ್ವಯ ಬೇಕು. ಸಾಮಾನ್ಯವಾಗಿ ಭಾರತೀಯ ದರ್ಶನಗಳಲ್ಲಿ ಎರಡು ರೀತಿಯ ಸಾಧನಗಳು ಕಂಡು ಬರುತ್ತವೆ. ಒಂದು ಆಚಾರ ಪ್ರಧಾನವಾದುದು. ಇನ್ನೊಂದು ವಿಚಾರ ಪ್ರಧಾನವಾದುದು. ಆಚಾರದ ಸಂಬಂಧ ಹೃದಯಕ್ಕೆ ವಿಚಾರದ ಸಂಬಂಧ ಬುದ್ಧಿಗೆ ಆಗುತ್ತದೆ. ಆಚಾರ ಮತ್ತು ವಿಚಾರಗಳ ಸಮನ್ವಯದಲ್ಲಿ ರೂಪಗೊಂಡ ಧರ್ಮ ವೀರಶೈವರದು.
ಭಾರತೀಯ ತತ್ವಜ್ಞಾನ ಆತ್ಮದ ನಿರೀಕ್ಷಣೆಯನ್ನು ಬೋಧಿಸಿದರೆ ವಿಜ್ಞಾನ ಬಹಿರಂಗದ ಜಗತ್ತಿಗೆ ಸೀಮಿತವಾಗುತ್ತದೆ. ವಿಜ್ಞಾನದಲ್ಲಿ ವಿಶ್ವದ ವಿನ್ಯಾಸ, ರಚನೆ, ಸ್ವರೂಪ, ವಸ್ತುಗಳ ಪರಸ್ಪರ ಸಂಬಂಧ ಹಾಗೂ ಅವುಗಳ ಹಿಂದಿರುವ ಶಕ್ತಿಗಳ ಅನ್ವೇಷಣೆಗಳು ಕಂಡು ಬಂದರೆ ಆತ್ಮಜ್ಞಾನವು ಜಗತ್ತಿನ ಬಹಿರಂಗದ ವಸ್ತುಗಳಿಗೆಲ್ಲ ನೀಡಿ ಆನಂದವನ್ನು ಕೊಡುತ್ತದೆ. ಆ ಅರಿವು ಆನಂದಗಳಿಂದ ಅಖಂಡತ್ವವನ್ನು ಅರ್ಥಾತ್ ಪರಿಪೂರ್ಣತ್ವವನ್ನು ಕರುಣಿಸುತ್ತದೆ.
ವಸ್ತುತಃ ವಿಜ್ಞಾನವು ಕಾರ್ಯ ಕಾರಣಗಳ ಸಂಬಂಧವನ್ನು ಹುಡುಕುತ್ತದೆ. ಆದರೆ ಪರಮಕಾರಣಿಕನ ಕಾಣುವಿಕೆಯನ್ನು ಅರಿಯಲಾರದು. ಸೃಷ್ಟಿ ವೈಚಿತ್ರ್ಯವನ್ನು ಕುರಿತು ಹೇಗೆ ಎಂಬುದನ್ನು ಹೇಳಬಲ್ಲುದೆ ಹೊರತು ಏಕೆ ಎಂಬುದನ್ನು ಅದು ಉತ್ತರಿಸಲಾರದು. ಈ ಪ್ರಶ್ನೆಯನ್ನು ಎತ್ತಿಕೊಳ್ಳುವದೇ ತತ್ವಜ್ಞಾನ.