ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ೫.೯೮ ಕೋಟಿ ರೂ. ಮೌಲ್ಯದ ಚರಾಸ್ತಿ, ೨೨.೯೫ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ೨೮.೯೩ ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ.
ಅವರು ಕೈಯಲ್ಲಿ ೩ ಲಕ್ಷ ರೂ. ನಗದು, ಎಫ್‌ಡಿ ಮತ್ತು ಆರ್‌ಡಿಗಳಲ್ಲಿ ೬.೮೩ ಲಕ್ಷ ರೂ., ಎಸ್‌ಬಿ ಖಾತೆಗಳಲ್ಲಿ ೩೩.೮೦ ಲಕ್ಷ ರೂ. ಹೊಂದಿದ್ದಾರೆ. ಸಾರ್ವಜನಿಕ ಕಂಪನಿಗಳಲ್ಲಿ ೬೪.೭೭ ಲಕ್ಷ ರೂ., ಖಾಸಗಿ ಕಂಪನಿಗಳಲ್ಲಿ ೬೪.೯೮ ಲಕ್ಷ ಹಾಗೂ ಪಾರ್ಟನರ್‌ಶಿಪ್‌ನಲ್ಲಿ ೧.೪೪ ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಪುತ್ರ ಭರತ್ ಬೊಮ್ಮಾಯಿಗೆ ೧೪.೭೪ ಲಕ್ಷ ರೂ. ವೈಯಕ್ತಿಕ ಸಾಲ ನೀಡಿದ್ದಾರೆ. ೧.೫೦ ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದು ಇವರ ಹೆಸರಿನಲ್ಲಿ ಯಾವುದೇ ವಾಹನವಿಲ್ಲ. ಬಸವರಾಜ ಬೊಮ್ಮಾಯಿ ಅವರಿಗೆ ೨೨.೯೫ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದ್ದು ಹುಬ್ಬಳ್ಳಿ ತಾಲೂಕು ತಾರಿಹಾಳ ಗ್ರಾಮದ ಬಳಿ ೮೨ ಲಕ್ಷ ರೂ. ಮೌಲ್ಯದ ಕೃಷಿ ಜಮೀನಿದೆ. ಯಲಹಂಕ ಹೋಬಳಿಯಲ್ಲಿ ೪,೨೫೦ ಚ.ಅಡಿ ವಿಸ್ತೀರ್ಣದ ೩ಕೋಟಿ ರೂ. ಮೌಲ್ಯದ ಹಾಗೂ ಹುಬ್ಬಳ್ಳಿ ಬೆಂಗೇರಿಯಲ್ಲಿ ೪.೪೪ ಕೋಟಿ ರೂ. ಮೌಲ್ಯದ ೨೧೭೮೦ ಚ.ಅಡಿ ವಿಸ್ತೀರ್ಣದ ಕೃಷಿಯೇತರ ಜಮೀನಿದೆ.
ಧಾರವಾಡದ ಲಕ್ಕಮನಹಳ್ಳಿ ಕೈಗಾರಿಕಾ ಪ್ರದೇಶ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ಹಾಗೂ ಕಾರವಾರ ತಾಲೂಕು ಮಾಜಾಳಿ ಗ್ರಾಮದಲ್ಲಿ ಸೇರಿ ೬.೫೦ ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ. ಶಿಗ್ಗಾವಿಯಲ್ಲಿ ಮನೆ ಹಾಗೂ ಬೆಂಗಳೂರಿನ ಲಾವೆಲ್ಲೆ ರಸ್ತೆಯ ಕ್ಯಾಸಲಾವೆಲ್ಲೆ ಅಪಾರ್ಟ್ಮೆಂಟ್‌ನಲ್ಲಿ ಫ್ಲಾಟ್ ಹೊಂದಿದ್ದಾರೆ. ಸಿಎಂ ಬೊಮ್ಮಾಯಿ ಅವರು ೫.೭೯ ಕೋಟಿ ರೂ. ಸಾಲ ಮಾಡಿದ್ದಾರೆ.
ಪತ್ನಿ ಚೆನ್ನಮ್ಮ ಅವರಲ್ಲಿ ೫೦ ಸಾವಿರ ರೂ. ನಗದು, ೭೮.೮೩ ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿದಂತೆ ೧.೧೪ ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ೧೯.೨೦ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ೧.೫೭ ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ. ಮಗಳು ಅದಿತಿ ಹೆಸರಿನಲ್ಲಿ ೧.೨೮ ಕೋಟಿ ರೂ. ಮೌಲ್ಯದ ಚರಾಸ್ತಿಯಿದೆ.
೨೦೧೮ರ ಚುನಾವಣೆಯಲ್ಲಿ ಬೊಮ್ಮಾಯಿ ಅವರು ೧೦.೧೯ ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.