ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರವನ್ನು ಪೋಷಿಸಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಟುವಾಗಿ ಟೀಕಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೈತಿಕ ಹೊಣೆ ಹೊತ್ತು ಸಿಎಂ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳ ಮೇಲೆಯೂ ಲೋಕಾಯುಕ್ತ, ಇಡಿ, ಐಟಿ ದಾಳಿಗಳನ್ನು ನಡೆಸಬೇಕು ಎಂದರು. ಆಡಳಿತಾರೂಢ ಶಾಸಕರ (ಮಾಡಾಳು ವಿರೂಪಾಕ್ಷಪ್ಪ) ಮನೆಯಲ್ಲೇ ಎಂಟು ಕೋಟಿ ರೂಪಾಯಿ ದೊರೆಯುತ್ತದೆಂದರೆ ಮುಖ್ಯಮಂತ್ರಿ ಹಾಗೂ ಇತರ ಸಚಿವರ ಮನೆಗಳಲ್ಲಿ ಇನ್ನೆಷ್ಟು ಸಿಗಬಹುದು ಎಂದು ಪ್ರಶ್ನಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವರಿಗೆ (ಸಿಎಂ), ಇವರು ಭ್ರಷ್ಟರಿಗೆ ರಕ್ಷಣೆ ನೀಡುತ್ತಿದ್ದಾರೆ. ಭ್ರಷ್ಟಾಚಾರದ ದಾಖಲೆ ಕೊಡಿ ಎಂದು ಕೇಳುವ ಬೊಮ್ಮಾಯಿಯವರಿಗೆ ಮಾಡಾಳು ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣ ಸಿಕ್ಕಿದ್ದು ಪುರಾವೆಯಾಗಿ ಕಾಣುವುದಿಲ್ಲವೇ ಎಂದು ಕೇಳಿದರು.
ಒಬ್ಬ ಮಾಡಾಳು, ಇನ್ನೊಬ್ಬ ಶಂಕರ್ ಮನೆ ಮೇಲಿನ ದಾಳಿಗಳು ಕೇವಲ ತೋರಿಕೆಗೆ ಮಾತ್ರ. ಬಿಜೆಪಿ ಸರ್ಕಾರದ ಎಲ್ಲ ಸಚಿವರು ಹಾಗೂ ಸಿಎಂ ಮನೆ ಮೇಲೆ ದಾಳಿ ನಡೆದರೆ ಕೋಟ್ಯಂತರ ರೂಪಾಯಿ ಅಕ್ರಮ ಹಣ ದೊರೆಯಬಹುದು ಎಂದರು.
ಒಂದು ಕ್ಷಣ ಇರಲ್ಲ…
ಕಾಂಗ್ರೆಸ್ ನೀಡಿರುವ 3 ಗ್ಯಾರಂಟಿಗಳ ವಾಗ್ದಾನವನ್ನು ಅಧಿಕಾರ ಸ್ವೀಕರಿಸಿದ ತಕ್ಷಣ ಈಡೇರಿಸುತ್ತೇವೆ. ಈಡೇರಿಸದೇ ಇದ್ದರೆ ಒಂದು ಸೆಕೆಂಡ್ ಕೂಡ ಕುರ್ಚಿಯ ಮೇಲೆ ಕೂರಲ್ಲ ಎಂದು ಪ್ರತಿಪಕ್ಷ ನಾಯಕ ಒತ್ತಿ ಹೇಳಿದರು.