ಬೈಕ್‌ಗೆ ಬಸ್ ಡಿಕ್ಕಿ: ಮಗಳು ಸ್ಥಳದಲ್ಲೇ ಸಾವು, ತಂದೆಗೆ ಗಂಭೀರ ಗಾಯ

KWR
Advertisement

ಕಾರವಾರ: ತಂದೆ ಮಗಳು ಚಲಿಸುತ್ತಿದ್ದ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಮಗಳು ಸ್ಥಳದಲ್ಲಿಯೇ ಮೃತಪಟ್ಟು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬಿಣಗಾ ಬಳಿ ಶನಿವಾರ ನಡೆದಿದೆ.
ಬಿಣಗಾದ ಲವಿಟಾ ಜಾರ್ಜ್ ಫೆರ್ನಾಂಡೀಸ್ (೧೩) ಮೃತ ಬಾಲಕಿ. ಈಕೆಯ ತಂದೆ ಜಾರ್ಜ್ ಫೆರ್ನಾಂಡೀಸ್ (೪೧) ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಬಟ್ಟೆ ಖರೀದಿಗೆ ಬೈಕ್ ಮೇಲೆ ನಗರಕ್ಕೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದರು. ಇದೇ ವೇಳೆಗೆ ಬೆಂಗಳೂರಿನಿಂದ ಕಾರವಾರಕ್ಕೆ ವೇಗವಾಗಿ ಆಗಮಿಸುತ್ತಿದ್ದ ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಾಲಕಿ ತಲೆ ರಸ್ತೆಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರ ಗಾಯಗೊಂಡಿದ್ದ ಬಾಲಕಿ ತಂದೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯರು ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು. ಅರೆಬರೆ ಕಾಮಗಾರಿ ನಡೆಯುವ ಬಗ್ಗೆ ಅರಿವಿದ್ದರೂ ಬಸ್ ಚಾಲಕರು ವೇಗವಾಗಿ ಚಲಿಸುತ್ತಾರೆ. ಇದರಿಂದ ಈ ಭಾಗದಲ್ಲಿ ಪದೆ ಪದೆ ಅಪಘಾತವಾಗುತ್ತಿದೆ. ಇದೀಗ ಬಾಳಿ ಬದುಕಬೇಕಾದ ಬಾಲಕಿ ಸಾವನ್ನಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಖಾಸಗಿ ಬಸ್ ಮಾಲಕರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಜಾರ್ಜ್ ಫರ್ನಾಂಡಿಸ್ ಅವರಿಗೆ ಸೂಕ್ತ ಚಿಕತ್ಸೆ ಕೊಡಿಸಬೇಕು. ಅಲ್ಲದೆ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರತಿಭಟನಾಕಾರರ ಮನವೊಲಿಸಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂದೆ ಪಡೆಯಲಾಗಿದೆ.
ಅವೈಜ್ಞಾನಿಕ ಅರೆಬರೆ ಕಾಮಗಾರಿಗೆ ಆಕ್ರೋಶ
ಇನ್ನು ಸ್ಥಳೀಯರು ಬಿಣಗಾದಲ್ಲಿ ಪ್ರಸ್ತುತ ಅಪಘಾತವಾದ ಪ್ರದೇಶದಲ್ಲಿ ಈವರೆಗೆ ನಾಲ್ಕು ಅಪಘಾತಗಳಾಗಿದೆ. ಈ ಪ್ರದೇಶಲ್ಲಿ ಸರ್ವಿಸ್ ರಸ್ತೆ ಸಮರ್ಪಕವಾಗಿ ಮಾಡದ ಕಾರಣ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಹೆದ್ದಾರಿಯುದ್ದಕ್ಕೂ ಅರೆಬರೆ ಕಾಮಗಾರಿ ನಡೆಸಿರುವ ಐಆರ್‌ಬಿ ಕಂಪೆನಿ ವಿರುದ್ಧವೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.