ಚಿತ್ರದುರ್ಗ : ಕಾಂಗ್ರೆಸ್ ತಟ್ಟೆಯಲ್ಲಿ ನೋಣ ಸೇರಿದಂತೆ ಏನೇನೋ ಬಿದ್ದಿದೆ ಅದನ್ನು ಇಟ್ಟುಕೊಂಡು, ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಲೇವಡಿ ಮಾಡಿದ್ದಾರೆ.
ಚಿತ್ರದುರ್ಗದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತದಾರರಿಗೆ ಹಣ ಕೊಡುವ ವಿಚಾರವಾಗಿ ರಮೇಶ್ ಜಾರಕಿಹೊಳಿ ಬಾಯಿ ಮಾತಲ್ಲಿ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ದೂರು ನೀಡಿದ್ದಾರೆ. ಹಣ ಕೊಟ್ಟಾಗ ಮಾತ್ರ ಅಪರಾಧ, ಹೇಳುವುದು ಅಪರಾಧ ಅಲ್ಲ. ಅಲ್ಲದೆ ಎಲ್ಲರೂ ಕೂಡಾ ಅದನ್ನೇ ಮಾಡುತ್ತಿರುವುದು. ಸತ್ಯಹರಿಶ್ಚಂದ್ರನ ಮಕ್ಕಳು ಯಾರು ಕೂಡ ರಾಜಕೀಯದಲ್ಲಿ ಇಲ್ಲ. ಒಂದು ಬೆರಳಿಂದ ಬೇರೆಯವರನ್ನ ತೋರಿಸಿದರೆ, ನಾಲ್ಕು ನಮ್ಮ ಕಡೆ ನೋಡುತ್ತವೆ ಎಂದು ಟಾಂಗ್ ನೀಡಿದರು.
ಸಿಡಿ ವಿಚಾರ ಕುರಿತು ಪ್ರತಿಕ್ರಿಯೇ ನೀಡಿದ ಅವರು, ದುಷ್ಮನ್ ಕಿದರ್ ಹೈ ಅಂದ್ರೆ ಬಗಲ್ ಮೇ ಹೈ ಅಂತ, ದುಷ್ಟಶಕ್ತಿಗಳು ನಮ್ಮ ಜೊತೆಗೆ ಇರುತ್ತಾರೆ. ಇದು ಎಲೆಕ್ಟ್ರಾನಿಕ್ ಯುಗ ಯಾರು ಏನೂ ಬೇಕಾದರೂ ಮಾಡಬಹುದು ಎಂದು ಹೇಳಿದ ಅವರು, ನಾವು ಮೈತ್ರಿ ಸರ್ಕಾರ ಉರುಳಿಸಿದ್ದೇವೆ ಇದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ನಮ್ಮ ಮೇಲೆ ಕೋಪ ಇದೆ ಎಂದರು.
ಜನಾರ್ಧನ ರೆಡ್ಡಿ ಹೊಸ ಪಕ್ಷ ನಮಗೆ ಯಾವುದೇ ಎಪೆಕ್ಟ್ ಆಗುವುದಿಲ್ಲ. ಅವರನ್ನ ಪಕ್ಷಕ್ಕೆ ಕರೆತರುವ ವಿಚಾರ ದೊಡ್ಡವರಿಗೆ ಬಿಟ್ಟಿದ್ದು ಎಂದು ಹೇಳಿದ ಅವರು, ನಾವುಗಳು ತಂಡಗಳನ್ನಾಗಿ ಮಾಡಿಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಮತ್ತೆ ಬರುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.