ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸುವ ವೇಳೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಹೊಯ್ ಕೈ ನಡೆಸಿದರು. ವಾಹನಗಳಿಗೆ ಕಲ್ಲು ತೂರಲಾಯಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಹರೀಶ್ ಪೂಂಜ ಭಾರೀ ಸಂಖ್ಯೆಯ ಕಾರ್ಯಕರ್ತರ ನಡುವೆ ಅದ್ಧೂರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ. ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಲ್ಲಿಂದ ಕಾರ್ಯಕರ್ತರ ಜೊತೆಗೆ ಮೆರವಣಿಗೆ ನಡೆಸಿದರು. ಬೆಳ್ತಂಗಡಿ ವಿಧಾನಸೌಧ ಕಚೇರಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಬಳಿಕ ಮಾತನಾಡಿದ ನಡುವೆ ಹರೀಶ್ ಪೂಂಜ, ಅತಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದು ದೇವರ ಆಶೀರ್ವಾದ. ಜನರು ಅವಕಾಶ ಕೊಟ್ಟಿದ್ದಾರೆ. ಇದನ್ನು ಸದ್ಬಳಕೆ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ನಾಮಪತ್ರ..
ಬಿಜೆಪಿ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಮಧ್ಯಾಹ್ನ ಹೊತ್ತಿಗೆ ಕಾಂಗ್ರೆಸ್ ಮೆರವಣಿಗೆ ಬೆಳ್ತಂಗಡಿಗೆ ಬಂತು. ಸಂತೆಕಟ್ಟೆಯಿಂದ ಎರಡು ಕಿಮೀ ಉದ್ದಕ್ಕೆ ನಡೆದುಕೊಂಡೇ ಬಂದ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಮಾಜಿ ಸಚಿವ ವಸಂತ ಬಂಗೇರ, ಐವನ್ ಡಿಸೋಜ, ರಕ್ಷಿತ್ ಭಾವ ಚಿತ್ರನಟ ವಿಜಯ ರಾಘವೇಂದ್ರ, ನಿಕೇತ್ ರಾಜ್ ಮೌರ್ಯ, ಹರೀಶ್ ಕುಮಾರ್ ಮೊದಲಾದವರಿದ್ದರು.