ಬೆಂಗಳೂರು: ಬೆಂಗಳೂರಿನ ರಸ್ತೆಯಲ್ಲಿರುವ ಬಿ ಎಸ್ ಯಡಿಯೂರಪ್ಪನವರ ಸರ್ಕಾರಿ ನಿವಾಸಕ್ಕೆ ಕಾವೇರಿಗೆ ಆಗಮಿಸಿದ ಅಮಿತ್ ಶಾ ಕಾರಿನಿಂದ ಇಳಿಯುತ್ತಲೇ ಯಡಿಯೂರಪ್ಪನವರು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಲು ಮುಂದಾದರು. ಆಗ ಹೂಗುಚ್ಚ ವಿಜಯೇಂದ್ರಗೆ ಕೊಡಿ ಎಂದು ಅಮಿತ್ ಶಾ ಹೇಳಿದರು. ಯಡಿಯೂರಪ್ಪನವರು ಹೂಗುಚ್ಛವನ್ನು ವಿಜಯೇಂದ್ರಗೆ ನೀಡಿದರು. ವಿಜಯೇಂದ್ರ ಅವರಿಂದ ಹೂಗುಚ್ಛ ಪಡೆದ ಅಮಿತ್ ಶಾ ವಿಜಯೇಂದ್ರರ ಬೆನ್ನುತಟ್ಟಿ ಆಲಂಗಿಸಿ ಅಲ್ಲಿದ್ದ ಮಾಧ್ಯಮದವರಿಗೆ ಪೋಟೋ ತೆಗೆಯಲು ಅವಕಾಶ ನೀಡಿದರು. ಕೊನೆಗೆ ಮತ್ತೊಂದು ಹೂಗುಚ್ಛವನ್ನು ಯಡಿಯೂರಪ್ಪನವರ ಬಳಿಯಿಂದ ತೆಗೆದುಕೊಂಡರು.
ಇನ್ನು ಉಪಹಾರ ಕೂಟದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಅಮಿತ್ ಶಾ ಅವರ ನಡೆಯಿಂದ ಖುಷಿಯಾಗಿದೆ. ಪಕ್ಷದ ಕೆಲಸ ಮಾಡಲು ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರು ಸಿಎಂ, ರಾಜ್ಯಾಧ್ಯಕ್ಷರು, ಯಡಿಯೂರಪ್ಪನವರು ಸಮಾಲೋಚನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅತಂತ್ರ ಸೃಷ್ಟಿಸಲು ಬಿಡಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನ ಮನೆ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಎಸ್ವೈ, ಅಮಿತ್ ಶಾ ನಡುವೆ ರಾಜಕೀಯ ಬಿಟ್ಟು ಬೇರೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.