test
Advertisement
ಬೆಂಗಳೂರು: ಮಳೆ ಚಳಿ ಗಾಳಿಯನ್ನು ಲೆಕ್ಕಿಸದೆ ಸೂರ್ಯೋದಯಕ್ಕೂ ಮುನ್ನವೇ ನಿತ್ಯ ಮನೆ ಮನೆಗೂ ಪತ್ರಿಕೆ ತಂದು ಹಾಕುವ ಇವರ ಶ್ರಮ ಯಾರಿಗೂ ಲೆಕ್ಕಕ್ಕಿಲ್ಲ… ಒಂದು ದಿನ ಪತ್ರಿಕೆ ತಡವಾಗಿ ಬಂದಿತೆಂದರೆ ಇವರ ನೆನಪಾಗುತ್ತದೆ, ಅದು ಇವರನ್ನು ಬೈಯುವುದಕ್ಕೆ ಮಾತ್ರ… ಎಲ್ಲರಿಗಿಂತಲೂ ಮೊದಲೇ ಎದ್ದು ತುತ್ತಿನ ಚೀಲ ತುಂಬಿಸಿಕೊಳ್ಳಲೆಂದು ಪುಡಿಗಾಸಿಗಾಗಿ ಕಾಯಕ ಮಾಡುವ ಇವರು ಜಗತ್ತಿನ ವಿದ್ಯಮಾನಗಳ ಸುದ್ದಿ ಪತ್ರಿಕೆ ಹಂಚಲು ಹೊತ್ತ ಜವಾಬ್ದಾರಿಯ ನೊಗವನ್ನು ಯಾವತ್ತೂ ಇಳಿಸಿದವರಲ್ಲ… ಪತ್ರಿಕೆ ಹಂಚುವಾಗ ನಸುಕಿನಜಾವ ನಾಯಿ ಕಚ್ಚಿಸಿಕೊಂಡವರೆಷ್ಟೋ.. ಸೈಕಲ್ ಪಂಕ್ಚರ್ ಆದರೂ ನಡೆದುಕೊಂಡೇ ತಮ್ಮ ಕೆಲಸ ನಿರ್ವಹಿಸುವ ಈ ಜನರ ಬದುಕೇ ಪಂಕ್ಚರ್ ಆದರೆ ಯಾರಿಗೆ ಹೇಳಬೇಕು?.. ಪತ್ರಿಕೋದ್ಯಮವೆಂಬ ಆಲದಮರಕ್ಕೆ ವಿತರಕರು ಬೇರುಗಳಿಂದ್ದಂತೆ… ಕೊರೊನಾ ಸಂಕಷ್ಟದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿಸಿದ ಇವರು ಮಾಧ್ಯಮ ಕ್ಷೇತ್ರದ ಯೋಧರು… ಪತ್ರಿಕಾ ವಿತರಕರು ನಮ್ಮ ನಡುವಿನ ಕಣ್ಣಿಗೆ ಕಾಣದ ಹೀರೋಗಳು…
ಹೀಗೆಂದು ವೇದಿಕೆಯ ಮೇಲಿದ್ದ ಗಣ್ಯರು ಆಡಿದ ಆ ಒಂದೊಂದು ಮಾತುಗಳು ಪತ್ರಿಕಾ ವಿತರಕರ ಬದುಕಿನ ಬವಣೆಗಳನ್ನು ಜೊತೆಗೆ ಅವರ ಕಾರ್ಯಕ್ಷಮತೆಯನ್ನು ಒಂದೊಂದಾಗಿ ಅನಾವರಣಗೊಳಿಸಿದಂತಿತ್ತು.
ವಿಶ್ವ ಪತ್ರಿಕಾ ವಿತರಕರ ದಿನಾಚಣೆ ನಿಮಿತ್ತವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಗಣ್ಯರು ಪತ್ರಿಕಾ ವಿತರಕರ ನೋವಿಗೆ ದನಿಯಾದರೆ, ಪತ್ರಿಕಾ ವಿತರಕರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಒತ್ತಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ, ಪತ್ರಿಕಾ ವಿತರಕರ ಕಷ್ಟ-ನಷ್ಟಗಳನ್ನು ನಾನು ಹತ್ತಿರದಿಂದೆ ಬಲ್ಲವನಾಗಿದ್ದು, ಸಾಮಾನ್ಯರಲ್ಲಿ ಅಸಾಮಾನ್ಯರು ಎಂಬ ಕಾರ್ಯಕ್ರಮದ ಮೂಲಕ ಇವರ ತೊಂದರೆ ತಾಪತ್ರಯಗಳನ್ನು ಜನರಿಗೆ ತಿಳಿಸಲೆತ್ನಿಸಿದ್ದೆ ಎಂದರು. ಬೆಳಗಾಗುವ ಮುನ್ನವೇ ಎದ್ದು ಕಾಯಕದಲ್ಲಿ ತೊಡಗಿಕೊಳ್ಳುವ ಪತ್ರಿಕಾ ವಿತರಕರಿಗೆ ಒಂದು ದಿನವೂ ವಿಶ್ರಾಂತಿ ಎಂಬುದಿರುವುದಿಲ್ಲವಾದರೂ ಇವರ ಕಾರ್ಯಕ್ಷಮತೆ ಯಾರ ಗಮನಕ್ಕೂ ಬಾರದಿರುವುದು ಬೇಸರದ ಸಂಗತಿ ಎಂದರು.
ಜಪಾನಂದಸ್ವಾಮೀಜಿಯವರು ಮಾತನಾಡಿ, ಶ್ರೀಮಂತರೆನ್ನಿಸಿಕೊಂಡವರು ದೊಡ್ಡ ದೊಡ್ಡ ಹೋಟೇಲ್‌ಗೆ ಬಂದು ಕುಡಿಯುವ ಒಂದು ಚಹಾದ ಮೊತ್ತ ಇವರ ಒಂದು ತಿಂಗಳ ಸಂಭಾವನೆಗೆ ಸಮವಾಗಿದ್ದು, ಪತ್ರಿಕಾ ವಿತರಕರ ಕಷ್ಟಗಳನ್ನು ಕೇಳುವ ಮಾನವೀಯತೆ ಎಂಬುದು ಮರೆತು ಹೋಗಿರುವುದಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಇತ್ತ ವೇದಿಕೆಯ ಮೇಲಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಪತ್ರಕರ್ತ ರವಿ ಹೆಗಡೆ ಅವರು ಧ್ವನಿಗೂಡಿಸಿದರು.
ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಂಭುಲಿಂಗ ಅವರು ಪತ್ರಿಕಾ ವಿತರಕರ ಸಂಘದ ವತಿಯಿಂದ ವಾರ್ತಾ ಮತ್ತು ಪ್ರಸಾರ ಇಲಾಖೆ ಆಯುಕ್ತ ಹರ್ಷಾ ಅವರಿಗೆ ಸಂಘದ ಬೇಡಿಕೆಗಳ ಪಟ್ಟಿಯೊಂದನ್ನು ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಆಯುಕ್ತ ಹರ್ಷಾ, ವಿತರಕರ ಸಂಘದ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಹಲವು ದಶಕಗಳಿಂದ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದರೂ ಕಳೆದ ವರ್ಷ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಅಖಿಲ ಕರ್ನಾಟಕ ವಿತರಕರ ಸಂಘದ ನೂರಾರು ಸದಸ್ಯರು ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದುದು ವಿಶೇಷವಾಗಿತ್ತು. ಆದರೆ, ಮುಖ್ಯಮಂತ್ರಿ ಆದಿಯಾಗಿ ಸಂಬಂಧಿಸಿದ ಇಲಾಖೆಗಳ ಸಚಿವರ ಗೈರು ಹಾಜರಿಗೆ ಆಕ್ರೋಶ ವ್ಯಕ್ತವಾಯಿತು.
Like this:
Like Loading...