ಹುಬ್ಬಳ್ಳಿ: ರಾಜ್ಯದಲ್ಲಿ ಈಗ ಬಿಜೆಪಿ ಟೈಂ ಇದ್ದು, ಆ ಪಕ್ಷದಲ್ಲಿನ ಯಡಿಯೂರಪ್ಪ, ಈಶ್ವರಪ್ಪ ಅವರಂತಹ ಹಿರಿಯ ನಾಯಕರ ಮೇಲೆ ಒತ್ತಡ ತಂದು ನನ್ನ ವಿರುದ್ಧ ಮಾತನಾಡಿಸುತ್ತಿದ್ದಾರೆ. ಇದಕ್ಕೆಲ್ಲ ನಾನು ಮಹತ್ವ ಕೊಡುವುದಿಲ್ಲ. ಇದು ಬಹಿರಂಗ ಸತ್ಯ, ರಾಜ್ಯದ ಜನರಿಗೆ ಯಾರು ಏನು ಎಂಬುದು ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ಗುರುವಾರ ನಗರದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ತಲೆ ಮೇಲೆ ಟೋಪಿ ಹಾಕಿಕೊಳ್ಳಲಿ ಎಂದು ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಾರೆ. ಆದರೆ, ಅವರೂ ಟೋಪಿ ಹಾಕಿಕೊಂಡಿದ್ದನ್ನು ನಾನು ನೋಡಿದ್ದೇನೆ. ಒಂದು ಸಮುದಾಯಕ್ಕೆ ಅದರದ್ದೇ ಆದ ಆಚರಣೆ ಇರುತ್ತದೆ. ಅದನ್ನು ಗೌರವಿಸಬೇಕು ಎಂದು ನುಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರ ಅಲೆ ಇದ್ದು, ೧೩೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕೆಪಿಸಿಸಿ ಮಾಧ್ಯಮ ರಾಜ್ಯ ಉಸ್ತುವಾರಿ ರೋಹಣ ಗುಪ್ತಾ ಮಾತನಾಡಿ, ಬಿಜೆಪಿಯ ಶೇ.೪೦ ರಷ್ಟು ಕಮಿಶನ್ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿಯವರು ಆಡಳಿತ ನಡೆಸಿದರೂ ಜನರಿಗೆ ನೀಡಿದ ಶೇ.೯೫ ರಷ್ಟು ಭರವಸೆಗಳನ್ನು ಅವರು ಈಡೇರಿಸಿಲ್ಲ. ಈ ಬಾರಿ ಅವರಿಗೆ ೪೬ ಸ್ಥಾನಗಳಲ್ಲಿ ಗೆಲ್ಲುವುದು ಕಷ್ಟ. ನಂದಿನಿ ಹಾಲನ್ನು ಅಮೂಲ್ ಜೊತೆ ಸೇರಿಸಲು ಹೊರಟವರು ಇವರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.