ಹುಬ್ಬಳ್ಳಿ: ಬಿಜೆಪಿ ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ.
ಬಿಜೆಪಿ ಸುಳ್ಳು ಉತ್ಪಾದಿಸುವ ಕಂಪನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕಲಬುರಗಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾಂಡಾ ಜನಾಂಗಕ್ಕೆ ಹಕ್ಕುಪತ್ರ ವಿತರಣೆ ಮಾಡಲು ಆಗಮಿಸುತ್ತಿದ್ದಾರೆ. ಈ ಮೂಲಕ ನಾವೇ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಬಿಜೆಪಿಗರು ಹೊರಟ್ಟಿದ್ದಾರೆ. ಆದರೆ ನಿಜವಾಗಿಯೂ ನೋಡಿದಾಗ ಅಡುಗೆ ಮಾಡಿದವರು ನಾವು, ಇದೀಗ ಬಿಜೆಪಿಯವರು ಊಟ ಮಾಡಲು ಆಗಮಿಸಿದ್ದಾರೆ ಎಂದರು.
ಈ ಹಿಂದೆ 1992 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು ಎಂದರು.
ಅಲ್ಲದೇ ಉಳ್ಳುವವನೇ ಭೂಮಿಯ ಒಡೆಯ ಕಾನೂನಿನಂತೆ ವಾಸಿಸುವವನೇ ಮನೆಯ ಒಡೆಯ ಎಂಬ ಐತಿಹಾಸಿಕ ಕಾನೂನನ್ನು ಕಾಂಗ್ರೆಸ್ ಮಾಡಿದೆ. ಆದರೆ, ಇದೀಗ ಬಿಜೆಪಿ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲು ಹೊರಟಿದೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಬಾಯಲ್ಲಿ ಸುಳ್ಳು ಹೇಳಿಸಲು ಮುಂದಾಗುತ್ತಿದೆ ಎಂದು ದೂರಿದರು.
ನನ್ನ ಅಧಿಕಾರದ ಅವಧಿಯಲ್ಲಿ ಲಮಾಣಿ ಜನರ ಗುರು ಸೇವಾಲಾಲ್ ಅವರ ಜಯಂತಿಯನ್ನು ಸರ್ಕಾರಿ ಆಚರಣೆ ದಿನವಾಗಿ ಮಾಡಿದ್ದೇನೆ . ಲಂಬಾನಿ ಅಭಿವೃದ್ಧಿ ನಿಗಮಕ್ಕೆ ನಾನು 450 ಕೋಟಿ ರೂಪಾಯಿ ನೀಡಿದ್ದೇನೆ. ಇದೀಗ ಬಿಜೆಪಿಯವರು ಲಂಬಾಣಿ ಜನರ ಕಾಳಜಿ ಮಾಡುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಈಗಲೂ ಕೂಡಾ ನಾವೇ ತಾಂಡಾ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮಾಡಬೇಕಿದೆ ಎಂದು ಕುಟುಕಿದರು.
ಮೋದಿ ಕಂಡರೆ ಕಾಂಗ್ರೆಸ್ ನವರಿಗೆ ಭಯವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಮೋದಿ ಕಂಡರೆ ಭಯವಿಲ್ಲ, ದೇಶದ ಪ್ರಧಾನಿಗಳು ಎಂಬ ಗೌರವವಿದೆ. ಆದರೆ, ನಿಜವಾಗಿಯೂ ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ. ಯಾಕೆಂದರೆ ನಾನು ಆರ್.ಎಸ್.ಎಸ್ ಕುರಿತು ಟೀಕೆ ಮಾಡಿ ಸತ್ಯವನ್ನು ಬಹಿರಂಗಗೊಳಿಸುತ್ತೇನೆ. ಹಾಗಾಗಿ ನನ್ನ ಕಂಡರೆ ಬಿಜೆಪಿಗೆ ಭಯ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ್ರೆ ಅಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೆ ಎನ್ನುವುದು ಸುಳ್ಳು. ಅವರು ಕೇರಳ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಭಾಷಣ ಮಾಡಿದ್ದಾರೆ ಆದರೆ ಅಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ಅವರು ಭಾಷಣ ಮಾಡಿದರೇ ಗೆಲುವು ಸಾಧ್ಯವೇ ಎಂದು ಪ್ರಶ್ನಿಸಿದರು.