ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲಿ ಬಂಡಾಯ

Advertisement

ಮಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ತವರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಪುತ್ತಿಲ ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ ಅವರಿಗೆ ಬೆಂಬಲ ಘೋಷಿಸಿದರು. ನಾಮಪತ್ರ ಸಲ್ಲಿಕೆಗೆ ಮೊದಲು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ದರ್ಬೆಯಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ದರ್ಬೆಯಿಂದ ಹೊರಟು ತಾಲೂಕು ಆಡಳಿತ ಸೌಧದ ಬಳಿ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಬಿಜೆಪಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ರಕ್ಷಣೆ ಮತ್ತು ಕಾರ್ಯಕರ್ತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನನ್ನ ಸ್ಪರ್ಧೆ. ಇದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಲ್ಲ ಹಿಂದೂ ಸಮಾಜದ ವಿಜಯೋತ್ಸವವಾಗಿದೆ. ಕಟ್ಟ ಕಡೆಯ ವ್ಯಕ್ತಿಯ ಜೊತೆಗೂ ನಾವಿದ್ದೇವೆ ಎಂಬುದುನ್ನು ತೋರಿಸಿಕೊಡಬೇಕಾಗಿದೆ. ಅತೀ ಶೀಘ್ರವಾಗಿ ನಮ್ಮ ಸ್ಪರ್ಧೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಆರ್‌ಎಸ್‌ಎಸ್‌ಗೆ ೧೦೦ ವರ್ಷವಾಗುತ್ತಿರು ಈ ಸಂದರ್ಭದಲ್ಲಿ ಭಗವಾಧ್ವಜದ ಅಡಿಯಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ನಿಮ್ಮ ಮನೆಯ ಮಗನೆಂದು ನೀವು ನನ್ನನ್ನು ಸ್ವೀಕರಿಸಬೇಕು. ಹಿಂದುತ್ವದ ಅಡಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಮಾಜಕ್ಕೆ ತೋರಿಸಿಕೊಡೋಣ ಎಂದರು. ನಂತರ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ತಾಲೂಕು ಆಡಳಿತ ಸೌಧದ ಉಪವಿಭಾಗಾಧಿಕಾರಿಗಳ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.