ಬಳ್ಳಾರಿ: ಪ್ರೀತಿಯಿಂದ ಕೃತಜ್ಞತೆ ತೋರಿಸುವುದಕ್ಕೆ ಇಷ್ಟು ಜನರು ಬಂದಿದ್ದಾರೆ. ಇಚ್ಛಾಶಕ್ತಿ ಪ್ರದರ್ಶಿಸಿ ಎಸ್ಟಿ ಮತ್ತು ಎಸ್ಸಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಹೊಟ್ಟೆನೋವಿಗೆ ಔಷಧಿ ಇದೆ. ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ. ಬಿಜೆಪಿ ಎಸ್ಸಿ-ಎಸ್ಟಿಗಳ ಮೀಸಲಾತಿ ಹೆಚ್ಚಿಸಿದೆ ಎಂದು ಕಾಂಗ್ರೆಸ್ಸಿಗೆ ಹೊಟ್ಟೆಕಿಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಪರಿಶಿಷ್ಟ ಪಂಗಡದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಸಿ ಟಿ ರವಿಯವರು ಮಹಾತ್ಮ ಗಾಂಧೀಜಿಯವರ ಕಾಂಗ್ರೆಸ್ ಪಕ್ಷ ಮತಾಂತರದ ವಿರುದ್ಧವಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಮತಾಂತರಕ್ಕೆ ಕುಮ್ಮಕ್ಕು ಕೊಡುತ್ತಿದೆ. ಶಿವನ ಆವಾಸ ಸ್ಥಾನ ಕಪಾಲಿ ಬೆಟ್ಟವನ್ನೇ ಮತಾಂತರ ಮಾಡಲು ಹೊರಟ ಡಿ.ಕೆ.ಶಿವಕುಮಾರಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಸಿದ್ದುಗೆ ಕುಂಕುಮ ಮತ್ತು ಕೇಸರಿ ಕಂಡರೆ ಆಗುವುದಿಲ್ಲ. ಅಂತವರನ್ನು ಮುಖ್ಯಮಂತ್ರಿ ಮಾಡಿತ್ತು. ಹಾಗಾಗಿ ಕುಂಕುಮ ಮತ್ತು ಕೇಸರಿ ಕಂಡರೆ ಆಗದವರಿಗೆ ಮತ ಹಾಕಬೇಡಿ. ಬದಲಿಗೆ ಕೇಸರಿ ಮತ್ತು ಕುಂಕುಮದ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಹೋಗುವಂತೆ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು