ಬಿಜೆಪಿ ಬಿಡಲಾರೆ ಕಾಂಗ್ರೆಸ್ ಸೇರಲಾರೆ

ಪೂರ್ಣಿಮಾ ಶ್ರೀನಿವಾಸ್
Advertisement

ಚಿತ್ರದುರ್ಗ: ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಹಿರಿಯೂರಿನಲ್ಲಿ ಸೋಮವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ವೇಳೆ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದ ಶಾಸಕಿ ಪೂರ್ಣಿಮಾಶ್ರೀನಿವಾಸ್ ಆಶೀರ್ವಾದ ಪಡೆದುಕೊಂಡರು.
ಕಳೆದ ಕೆಲವು ದಿನಗಳಿಂದ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು. ಈ ಬಗ್ಗೆ ಶಾಸಕರು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಿರಲಿಲ್ಲ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಿರಿಯೂರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಾಗತಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರೋಡ್ ಶೋನಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಕ್ಷದಲ್ಲಿ ಇರುವುದಾಗಿ ಸಂದೇಶ ರವಾನಿಸಿದರು.
ಈ ವೇಳೆ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೂರ್ಣಿಮಾ ನಮ್ಮ ಜೊತೆಯಲ್ಲೇ ಇದ್ದಾರಲ್ಲಾ ಎಂದು ಪೂರ್ಣಿಮಾ ಶ್ರೀನಿವಾಸ ಅವರ ಹೆಗಲ ಮೇಲೆ ಕೈ ಇಟ್ಟು ಹೇಳಿದರು.
ಈ ವೇಳೆ ಪೂರ್ಣಿಮಾ ಶ್ರೀನಿವಾಸ್ ಅವರು, ಟಿವಿಯವರಿಗೆ ಬುದ್ದಿ ಇಲ್ಲ. ಪದೇ ಪದೆ ನನ್ನ ಹೆಸರು ತೋರಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಹಾಗಾದರೂ ಪ್ರಚಾರ ಸಿಗುತ್ತಲ್ಲಾ ಎಂದು ನಕ್ಕರು. ನಂತರ ಅಪಾರ ಬೆಂಬಲಿಗರೊಂದಿಗೆ ಹಿರಿಯೂರಿನಲ್ಲಿ ನಡೆದ ರೋಡ್ ಶೋ ವೇಳೆಯಲ್ಲಿ ಶಾಸಕರು ಭಾಗವಹಿಸಿ ಕಾಂಗ್ರೆಸ್ ಸೇರುವುದಿಲ್ಲ ಬಿಜೆಪಿ ಬಿಡಲಾರೆ ಎಂಬ ಸಂದೇಶವನ್ನು ಕಾರ್ಯಕರ್ತರು, ಬಿಜೆಪಿ ನಾಯಕರಿಗೆ ರವಾನಿಸಿದರು.