ಹುಬ್ಬಳ್ಳಿ: ಬಿಜೆಪಿಯ ಯಾವುದೇ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ರಾಜಿನಾಮೆ ಸಲ್ಲಿಸಿಲ್ಲ. ಈ ಕುರಿತು ರಾಜ್ಯ ನಾಯಕರಿಗೂ ಯಾವುದೇ ಪತ್ರ ರವಾನಿಸಿಲ್ಲ ಎಂದು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಕಪಟಕರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಘೋಷಣೆಯಾಗದಿರುವುದರಿಂದ ಕೆಲವು ಉಹಾಪೋಹವನ್ನು ಸೃಷ್ಟಿ ಮಾಡಲಾಗುತ್ತಿದೆ. ಅವರ ಹೆಸರು ಲಿಸ್ಟ್ನಲ್ಲಿ ಇದೆ. ರಾಷ್ಟ್ರೀಯ ನಾಯಕರು ಅದರ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಈ ನಡುವೆ ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ರಾಜಿನಾಮೆ ನೀಡಿದ್ದೇವೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದುವರೆಗೂ ಯಾವುದೇ ಪದಾಧಿಕಾರಿಗಳು ರಾಜಿನಾಮೆ ಸಲ್ಲಿಸಿಲ್ಲ. ರಾಜ್ಯ ನಾಯಕರಿಗೂ ಸಲ್ಲಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.
ನಾನು ಕೂಡ ಕೆಲ ಪದಾಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅವರು ಪಕ್ಷದೊಂದಿಗೆ ಇರುವುದಾಗಿ ಹೇಳಿದ್ದಾರೆ ಎಂದರು. ನಮ್ಮ ಪಕ್ಷದಲ್ಲಿ ದೇಶ ಮೊದಲು ಎಂಬ ಸಿದ್ಧಾಂತವಿದೆ. ವ್ಯಕ್ತಿ ಪೂಜೆಯಿಲ್ಲ. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧರಾಗುತ್ತೇವೆ ಎಂದರು. ಮುಖಂಡರಾದ ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯಕ, ಪ್ರಶಾಂತ ಹಾವಣಗಿ, ಮಂಜುನಾಥ ನಾಗನಗೌಡರ, ಗುರು ಪಾಟೀಲ ಇದ್ದರು.