ಹಾವೇರಿ(ಹಿರೇಕೆರೂರ): ಜೆಡಿಎಸ್ ಅವರು ಕಾಂಗ್ರೆಸನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಕಾಂಗ್ರೆಸ್‌ನವರು ಜೆಡಿಎಸ್‌ನವರನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ನಾವು ಎ ಟೀಂ ಎಂದು ಇಬ್ಬರೂ ಒಪ್ಪುತ್ತಾರೆ. ಯಾವಾಗ ಅವರು ಬಿ ಟೀಂ ಆಗುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ನಮಗೆ ಎ, ಬಿ ಎನ್ನುವುದಕ್ಕಿಂತ ನಾವು ಜನತೆಯ ಟೀಂ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರೇಕೆರೂರಿನ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಮತದಾರರಿಗೆ ಆಮಿಷ ಒಡ್ಡುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಬಗ್ಗೆ ಇವರು ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್ ಎಂದರೆ ಪ್ರೆಶರ್ ಕುಕ್ಕರ್ ಪಕ್ಷ. ಅಲ್ಲಿ ಬಾಂಬ್ ಕುಕ್ಕರ್ ಇಲ್ಲಿ ಪ್ರೆಶರ್ ಕುಕ್ಕರ್. ಚುನಾವಣೆ ಸಮಯದಲ್ಲಿ ಪ್ರೆಶರ್ ಕುಕ್ಕರ್ ಕೊಟ್ಟು ಗೆಲ್ಲುವುದು. ಹೀಗಾಗಿ ಅವರಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ. ಅದರಲ್ಲಿ ಬಾಂಬ್ ಇಟ್ಟರೂ ಅಲ್ಲ ಪ್ರೆಶರ್ ಕುಕ್ಕರ್ ಎನ್ನುತ್ತಾರೆ. ಈ ರೀತಿಯ ದೊಂಬರಾಟದಿಂದ ಯಾವುದೇ ಸಹಾಯವಾಗುವುದಿಲ್ಲ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದ್ದಾರೆ ಎಂದರು.
ದೇಶದ ಮೊದಲ ಭ್ರಷ್ಟಾಚಾರದ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ
ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿ ಈ ದೇಶದ ಮೊದಲ ಭ್ರಷ್ಟಾಚಾರದ ಜೀಪ್ ಹಗರಣ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿ ಬಂತು. ಸ್ವಾತಂತ್ರ್ಯ ಬಂದ ನಂತರದಲ್ಲಿ ಭ್ರಷ್ಟಾಚಾರ ಅಲ್ಲಿಂದ ಪ್ರಾರಂಭವಾಯಿತು. ಭ್ರಷ್ಟಾಚಾರ ಕಾಂಗ್ರೆಸ್‌ನ ಅವಿಭಾಜ್ಯ ಅಂಗ. ಡಿ.ಕೆ.ಶಿವಕುಮಾರ್ ಬಹಳ ಸ್ವಚ್ಛ ಮನುಷ್ಯ. ಅವರಷ್ಟು ಸ್ವಚ್ಛ ಮನುಷ್ಯ ರಾಜಕಾರಣದಲ್ಲಿ ಯಾರು ಇಲ್ಲ ಎಂದು ವ್ಯಂಗ್ಯವಾಡಿದರು.