ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ

ಕೆ.ಆರ್.‌ ಪೇಟೆ
Advertisement

ಕೆ.ಆರ್. ಪೇಟೆ: ತಾಲೂಕಿನ ಋಣ ನಮ್ಮ ತಂದೆ ಹಾಗೂ ನನ್ನ ಮೇಲಿದೆ. ಆ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಪಟ್ಟಣದ ಹೊರವಲಯದ ಅಗ್ರಹಾರಬಾಚಹಳ್ಳಿ ಸಮೀಪವಿರುವ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ 2023ರ ವಿಧಾನ ಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಯಡಿಯೂರಪ್ಪ ಅವರಿಗೆ ಕೃಷ್ಣರಾಜಪೇಟೆ ತಾಲೂಕು ಎಂದರೆ ಅತೀವ ಪ್ರೀತಿ. ನನಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಿದ್ದರೂ ನಾನು ಮೊಟ್ಟಮೊದಲ ಬಾರಿಗೆ ಕೃಷ್ಣರಾಜಪೇಟೆ ಕ್ಷೇತ್ರದ ಮತಯಾಚನೆಗೆ ಬಂದಿದ್ದೇನೆ ಎಂದರೆ ಅದು ನನ್ನ ತಂದೆಯವರ ಜನ್ಮಭೂಮಿ ಅದಕ್ಕಾಗಿ ಬಂದಿದ್ದೇನೆ. ಮುಂದೆಯೂ ತಂದೆಯವರ ಜೊತೆ ಚುನಾವಣೆ ಪ್ರಚಾರಕ್ಕೆ ಬರುತ್ತೇನೆ. ನಾರಾಯಣಗೌಡ ಅವರನ್ನು ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಿ ವಿಧಾನ ಸೌಧಕ್ಕೆ ಕಳಿಸಕೊಡಿ ಎಂದು ಮನವಿ ಮಾಡಿದರು.
ಕೆಲವರು ಅತಂತ್ರ ಆದ್ರೆ ಸಾಕು ಅಂತ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಹುಮತ ಬರುತ್ತದೆ ಅಂತ ಹಗಲು ಕನಸು ಕಾಣುತ್ತಿದ್ದಾರೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.