ದಾವಣಗೆರೆ: ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಮುಂದಿನ ಚುನಾವಣೆಯಲ್ಲಿ ೧೪೫ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ನಮ್ಮ ಪಕ್ಷ ಅಧಿಕಾರ ಹಿಡಿಯುವುದು ಖಚಿತ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌ನವರು ಹೆಂಡ, ಹಣ ಬಲದಿಂದ ಚುನಾವಣೆ ಮಾಡಲು ಹೊರಟಿದ್ದು, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ಕಡೆ ಜನರು ಕಾಂಗ್ರೆಸ್‌ನ್ನು ತಿರಸ್ಕರಿಸುತ್ತಿದ್ದಾರೆ. ಆದರೂ ಕೂಡ ಕಾಂಗ್ರೆಸ್ ನವರು ಅಧಿಕಾರ ಹಿಡಿಯುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ೩೫೦೦ ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ. ನಾನೂ ಸಹ ನನ್ನ ಕ್ಷೇತ್ರ ಶಿಕಾರಿಪುರದಲ್ಲಿ ಇಷ್ಟು ದೊಡ್ಡ ಕೆಲಸ ಮಾಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಎಸ್.ವಿ ರಾಮಚಂದ್ರರನ್ನು ೫೦ ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಎಸ್.ವಿ ರಾಮಚಂದ್ರಪ್ಪಗೆ ಟಿಕೆಟ್ ಖಾಯಂ ಎಂಬುದನ್ನು ಸೂಚ್ಯವಾಗಿ ಹೇಳಿದರು.