ಬಿಜೆಪಿಯಿಂದ ಕನ್ನಡದ ಬೇರುಗಳಿಗೆ ಕೊಡಲಿಪೆಟ್ಟು

kumaraswamy
Advertisement

ಹುಬ್ಬಳ್ಳಿ: ಹಿಂದಿ ಹೇರಿಕೆ ಮೂಲಕ ಸದಾ ಕನ್ನಡದ ಮೇಲೆ ಪ್ರಹಾರ ನಡೆಸುತ್ತಲೇ ಇರುವ ಬಿಜೆಪಿ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ದೊಡ್ದರಂಗೇಗೌಡ ಸಮ್ಮೇಳನದಲ್ಲಿ ಎತ್ತಿದ್ದ ಪ್ರಶ್ನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಸಮ್ಮೇಳನದ ತಮ್ಮ ಭಾಷಣದಲ್ಲಿ ಅನುದಾನದ ಅನ್ಯಾಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಎದುರೇ ಬಿಜೆಪಿ ಸರಕಾರದ ಮುಖಕ್ಕೆ ರಾಚುವಂತೆ ಹೇಳಿದ್ದಾರೆ. ಈ ವಿಷಯ ಪ್ರಸ್ತಾಪ ಮಾಡಿದ ಅವರನ್ನು ಮನಸಾರೆ ಅಭಿನಂದಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಸರಕಾರ ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಬೇರುಗಳಿಗೆ ಕೊಡಲಿಪೆಟ್ಟು ಕೊಡುತ್ತಿದೆ. ನೆಲ, ಜಲ, ಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ಆ ಪಕ್ಷವು ಅನ್ಯಾಯದ ಸರಣಿಯನ್ನೇ ಮುಂದುವರಿಸಿದೆ. ಬೆಳಗಾವಿ ವಿಷಯದಲ್ಲಿ ವರ್ತಿಸುತ್ತಿರುವ ರೀತಿ ಕಳವಳಕಾರಿ. ಕೇಂದ್ರದಿಂದ ಕನ್ನಡಕ್ಕೆ ಆಗುತ್ತಿರುವ ಅನುದಾನದ ಅನ್ಯಾಯದ ವಿರುದ್ಧ ನಾನು ಅನೇಕ ಸಲ ದನಿ ಎತ್ತಿದ್ದೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಡಳಿತಕ್ಕೆ ಅದು ಕೇಳಲೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಸಂಸ್ಕೃತ, ಹಿಂದಿ ತುಷ್ಟೀಕರಣದಿಂದ ಕನ್ನಡಕ್ಕೆ ಅದೆಷ್ಟು ವಂಚನೆ ಆಗಿದೆ ಎನ್ನುವುದಕ್ಕೆ ಅನುದಾನದ ತಾರತಮ್ಯವೇ ಸಾಕ್ಷಿ ಎಂದು ಹೇಳಿದ್ದಾರೆ.