ಬಿಜೆಪಿಯಲ್ಲಿ ಲಿಂಗಾಯತರಿಗೆ ಗೌರವ ಸಿಗುತ್ತಿಲ್ಲ

Advertisement

ದಾವಣಗೆರೆ: ವೀರಶೈವ ಲಿಂಗಾಯತರಿಗೆ ಬಿಜೆಪಿಯಲ್ಲಿ ನಿರೀಕ್ಷಿತ ಮಟ್ಟದ ಗೌರವ ಸಿಗುತ್ತಿಲ್ಲ, ಆ ಕಾರಣಕ್ಕಾಗಿ ಬಿಜೆಪಿಯ ಅನೇಕ ವೀರಶೈವ ಲಿಂಗಾಯತ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಜೆಪಿ ವಿರುದ್ಧ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರಿಗೆ ನಿರೀಕ್ಷಿತ ಮಟ್ಟದ ಗೌರವ ಸಿಗುತ್ತಿಲ್ಲ‌. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆದರಿಸಿ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಗೊಂಬೆಯಂತೆ ಮಾಡಿದ್ದಾರೆ. ಬಿಜೆಪಿಯಲ್ಲಿ ಹೆಚ್ಚಾಗಿ ಕೆಲವೇ ಜಾತಿಗಳಿಗಷ್ಟೇ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಧಾರವಾಡ ಜಿಲ್ಲೆಯ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬೆಳಗಾವಿ ಜಿಲ್ಲೆಯ ಹಿರಿಯ ನಾಯಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಚಾರದಲ್ಲಿ ಬಿಜೆಪಿ ನಡೆಯೇ ಇದಕ್ಕೆ ಸಾಕ್ಷಿ. ಶೆಟ್ಟರ್ ಹಾಗೂ ಸವದಿ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಇದೆ. ಈ ಇಬ್ಬರ ಸೇರ್ಪಡೆಯಿಂದ ಸಿಎಂ ತವರು ಜಿಲ್ಲೆ ಹಾವೇರಿಯ ಎಲ್ಲಾ ಕ್ಷೇತ್ರಗಳ-ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂದರು.