ಹುಬ್ಬಳ್ಳಿ : ಕುಂದಗೋಳ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ತಮಗೆ ಟಿಕೆಟ್ ಸಿಗದೇ ಇದ್ದುದಕ್ಕೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
ಇಂದು ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಆಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.
ಕುಂದಗೋಳ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದಲೇ ಟಿಕೆಟ್ ಪಡೆದು ಸ್ಪರ್ಧಿಸುವ ಅಸೆ ಇತ್ತು. ಅದರೆ, ಪಕ್ಷ ನನ್ನನ್ನು ಗುರುತಿಸಲಿಲ್ಲ. ನನಗೆ ನಾಯಕರ ಬಲವಿಲ್ಲ. ಕ್ಷೇತ್ರದ ಜನರ ಬಲವಷ್ಟೇ ಇರುವುದು. ಇಂದು ಅವರ ಅಭಿಪ್ರಾಯ ಆಲಿಸಿದ ಬಳಿಕ ರಾಜೀನಾಮೆ ನಿರ್ಧಾರ ಮಾಡಿದ್ದಾಗಿ ಘೋಷಿಸಿದರು.
ಇನ್ನೂ ರಾಜೀನಾಮೆ ಪತ್ರ ಸಲ್ಲಿಸಿಲ್ಲ. ಆದರೆ, ನಿರ್ಧಾರ ಮಾಡಿದ್ದೇನೆ. ಟಿಕೆಟ್ ಸಿಗದೇ ಇದ್ದುದ್ದಕ್ಕೆ ನನಗೆ, ಬೆಂಬಲಿಗರಿಗೆ ತುಂಬಾ ನೋವಾಗಿದೆ. ರಾಜೀನಾಮೆ ಪತ್ರ ತಕ್ಷಣ ಸಲ್ಲಿಸೋಲ್ಲ. ಬೆಂಗಳೂರಿಗೆ ತೆರಳಿ ಪಕ್ಷದ ಹಿರಿಯರನ್ನು ಭೇಟಿ ಮಾಡುತ್ತೇನೆ. ಅಲ್ಲಿನ ಬೆಳವಣಿಗೆ ನೋಡುತ್ತೇನೆ. ವ್ಯತಿರಿಕ್ತವಾದರೆ ರಾಜೀನಾಮೆ ಪತ್ರವನ್ನ ಪಕ್ಷದ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ ಎಂದರು.
ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಬೇಕೊ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದಿಂದ ಸ್ಪರ್ಧಿಸಬೇಕೊ ಎಂಬ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.