ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳು ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ೧೫೦ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಹುಮ್ಮಸ್ಸಿನಿಂದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರು ಆಡಳಿತದಲ್ಲಿ ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದರು.
ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದು, ಶೇ. ೪೦ ರಷ್ಟು ಕಮಿಷನ್ ಪಡೆದಿದ್ದು, ೫೪೫ ಪಿಎಸ್‌ಐ ನೇಮಕಾತಿಯಲ್ಲಿ ಅವ್ಯವಹಾರ ಮಾಡಿ ಎಜಿಡಿಪಿ ಸೇರಿದಂತೆ ೫೦ ಕ್ಕೂ ಹೆಚ್ಚು ಜನರನ್ನು ಬಂಧನ ಮಾಡಿಸಿದ್ದು, ಚುನಾವಣೆ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ವಿರೋಧಿ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿದ್ದು, ಕೊರೊನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ೩೦ ಜನರು ಮರಣ ಹೊಂದಿದ್ದರೂ ೩ ಜನರು ಎಂದು ಹೇಳಿರುವುದು, ನರ್ಸಿಂಗ್ ಪರೀಕ್ಷೆಯಲ್ಲಿ ಮಾಸ್ಕ್ ಕಾಫಿ ಆಗುವ ಹಿನ್ನೆಲೆಯಲ್ಲಿ ಸ್ಟಿಂಗ್ ಆಪರೇಷನ್ ನಂತರ ೧.೫೦ ಲಕ್ಷ ವಿಧ್ಯಾರ್ಥಿಗಳ ಪರೀಕ್ಷೆ ಮುಂದೂಡಿದ್ದು, ಜೊತೆಗೆ ಒಂದೊಂದು ಪರೀಕ್ಷಾ ಕೇಂದ್ರದಿಂದ ೨೫ ಲಕ್ಷ ಕಿಕ್ ಬ್ಯಾಕ್ ಅನ್ನು ಸಂಬಂಧಪಟ್ಟ ಇಲಾಖೆ ತೆಗೆದುಕೊಂಡಿರುವುದೇ ಸಾಧನೆಯಾಗಿದೆ ಎಂದು ಆರೋಪಿಸಿದರು.