ಬಿಜೆಪಿಗೆ ಜಗದೀಶ ಶೆಟ್ಟರ್ ವಿದಾಯ

ಜಗದೀಶ್ ಶೆಟ್ಟರ್
Advertisement

ಹುಬ್ಬಳ್ಳಿ: ಸುದೀರ್ಘ 30 ವರ್ಷಗಳ ಬಿಜೆಪಿ ಜೊತೆಗಿನ ಸಂಬಂಧವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಡೆದುಕೊಂಡಿದ್ದು, ಕಮಲ ಪಾಳಯಕ್ಕೆ ವಿದಾಯ ಹೇಳಿದ್ದಾರೆ.
ಜಗದೀಶ ಶೆಟ್ಟರ್ ಮನ ಒಲಿಕೆಗೆ ಕೊನೆಯ ಕ್ಷಣದವರೆಗೂ ಕಸರತ್ತು ನಡೆಯಿತು. ಕೊನೆಗೆ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮನ ಒಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೂವರು ನಾಯಕರು ನಡೆಸಿದ ಸಭೆಯ ಬಳಿಕ ಜಗದೀಶ ಶೆಟ್ಟರ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಜಗದೀಶ ಶೆಟ್ಟರ್, ದೆಹಲಿ ವರಿಷ್ಠರ ಭೇಟಿಗೆ ತೆರಳಿದ್ದಾಗ ಜೆ.ಪಿ. ನಡ್ಡಾ ಅವರು, ನಮ್ಮ ಕುಟುಂಬದ ಸದಸ್ಯರು ಚುನಾವಣೆಗೆ ನಿಲ್ಲಬಹುದು. ಆದರೆ ನೀವು ನಿಲ್ಲುವಂತಿಲ್ಲ ಎಂದು ಹೇಳಿದ್ದರು. ಆದರೆ, ನಮ್ಮ ಕುಟುಂಬದವರಿಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಹೀಗಾಗಿ ನಾನೇ ಚುನಾವಣೆ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದೆ. ಇದೇ ಹಿನ್ನೆಲೆಯಲ್ಲಿ ಎರಡು ದಿನಗಳ ಸಮಯವನ್ನು ಕೇಳಿದ್ದರು. ಆದರೆ, ಎರಡು ದಿನ‌ಕಳೆದರೂ ಉತ್ತರ ಬಾರದ ಹಿನ್ನೆಲೆಯಲ್ಲಿ ಶನಿವಾರ ಬೆಂಬಲಿಗರ, ಅಭಿಮಾನಿಗಳ ಸಭೆ ಕರೆದಿದ್ದೆ. ಟಿಕೆಟ್ ಸಿಕ್ಕರೂ ಸರಿ ಸಿಗದಿದ್ದರೂ ಸರಿ. ನೀವು ಕಣಕ್ಕೆ ಇಳಿಯಿರಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂಬ ಸಂದೇಶವನ್ನು ಬೆಂಬಲಿಗರು ನೀಡಿದ್ದರು. ಅಲ್ಲದೆ, ಸದ್ಯದ ಪರಿಸ್ಥಿತಿ ಉಸಿರುಗಟ್ಟುವ ವಾತಾವರಣ ನಿರ್ಮಿಸಿತ್ತು. ಹೀಗಾಗಿ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.