ಧಾರವಾಡ: ತಾಯಿ ಹಾಲು ಕುಡಿದವನೇ ಬದುಕೊಲ್ಲ ಇನ್ನ ವಿಷಾ ಕುಡದೋರ ಬದಕ್ತಾರಾ… ಎಲ್ಲೋ ದೂರ ಕುಂತ ವಿಡಿಯೋ ಮಾಡಿ ನಾ ಬರ್ತೇನಿ.. ಬರ್ತೇನಿ ಅಂದ್ರ ಬಾರೋ ನಿನ್ನ ಕಾಯಾಕತ್ತೇನಿ…
ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಶಾಸಕ ಅಮೃತ ದೇಸಾಯಿ ಪರೋಕ್ಷವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಇತ್ತೀಚಿನ ವಿಡಿಯೋಗೆ ಟಾಂಗ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಂಕಲ್ಪ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡುವ ಮೂಲಕ ಗ್ರಾಮೀಣ ಕ್ಷೇತ್ರದ ರಾಜಕೀಯ ಎದುರಾಳಿಗೆ ಸೆಡ್ಡು ಹೊಡೆದಿದ್ದು, ಇಂದಿನಿಂದಲೇ ಚುನಾವಣಾ ರಣಕಹಳೆ ಆರಂಭವಾಗಿದೆ. ಕಾರ್ಯಕರ್ತರ ಶಕ್ತಿ, ಹುಮ್ಮಸ್ಸು ನನ್ನ ಬೆನ್ನ ಹಿಂದೆ ಇದ್ದರೆ ನಾನು ಇಡೀ ಜಗತ್ತನ್ನೇ ಗೆಲ್ಲಬಲ್ಲೆ. ಧಾರವಾಡದ ಇತಿಹಾಸವನ್ನು ಬದಲಿಸುತ್ತೇವೆ. ಇದಕ್ಕೆ ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂಬ ಸಂಕಲ್ಪ ತೊಡಿ. ಧಾರವಾಡ ಶಾಂತಯುತವಾಗಿರಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹುಮ್ಮಸ್ಸಿನಿಂದಲೇ ಹೇಳುತ್ತಿದ್ದಂತೆ ನೆರೆದಿದ್ದ ಸಭಿಕರು ಸಿಳ್ಳೆ, ಕೇಕೆ ಹಾಕಿದರು.
ನಾನು ಶಾಸಕನಾಗಿ 4.5 ವರ್ಷವಾಯಿತು. ಈ ಅವಧಿಯಲ್ಲಿ 1,400 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಅರಳುಮರಳು ಎಂದು ಮಾತನಾಡುತ್ತಾರೆ. ಆದರೆ, ಅಧಿವೇಶನದಲ್ಲಿ ಪಂಚೆ ಕಳೆದರೂ ನಿಮಗೆ ಅರಿವು ಇರಲಿಲ್ಲ. ಹೀಗಾಗಿ, ಅರಳು ಮರಳು ಬಿಜೆಪಿ ನಾಯಕರಿಗೆ ಇಲ್ಲ. ಕಾಂಗ್ರೆಸ್ಸಿಗರಿಗೆ ಇದೆ ಎಂದು ಲೇವಡಿ ಮಾಡಿದರು.